ಬೆಂಗಳೂರು, ಮಾರ್ಚ್ 20, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ದಾವಣಗೆರೆಯಲ್ಲಿ ಮೇ 7ರಿಂದ 12 ರವರೆಗೆ 'ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ' ನಡೆಯಲಿದೆ ಎಂದು ತಿಳಿಸಿದರು.

 ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ವತಿಯಿಂದ ದಾವಣಗೆರೆ ನಗರದಲ್ಲಿ ಮೇ 7ರಿಂದ 12 ರವರೆಗೆ 6 ದಿನಗಳ ಕಾಲ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ವಾಮದೇವಪ್ಪ ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆರು ದಿನಗಳೂ ವಿಭಿನ್ನ ಸಮ್ಮೇಳನಗಳನ್ನು ನಡೆಸಲಾಗುತ್ತಿದ್ದು ಮೇ 7ರಂದು ಸಾಹಿತ್ಯ ಸಮ್ಮೇಳನ, ಮೇ 8ರಂದು ಯೂ ಟ್ಯೂಬರ್ಸ್ ಸಮ್ಮೇಳನ. ಮೇ 9 ರಂದು ಶಿಕ್ಷಣ ಸಮ್ಮೇಳನ, ಮೇ 10 ರಂದು ಸಿನಿ ಸಾಹಿತ್ಯ ಹಾಗೂ ಕಲಾವಿದರ ಸಮ್ಮೇಳನ, ಮೇ 11 ರಂದು ಕೃಷಿ ಸಮ್ಮೇಳನ ಹಾಗೂ ಮೇ 12 ರಂದು ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿ ದಿನವೂ ಮೂರು ವಿಭಿನ್ನ ಸಮ್ಮೇಳನಗಳನ್ನು ನಡೆಸಲು ಮೂರು ವೇದಿಕೆಗಳನ್ನು ಸಿದ್ಧಪಡಿಲಾಗುವುದು. ಬಸವಣ್ಣನವರ ವೇದಿಕೆ, ಸರ್ವಜ್ಞ ವೇದಿಕೆ ಹಾಗೂ ರಾಣಿ ಚೆನ್ನಮ್ಮ ಎಂಬ ಮೂರು ವೇದಿಕೆಗಳಲ್ಲಿ ಆರು ದಿನಗಳ ಕಾಲ ಬೆಳಿಗ್ಗೆ 10.00 ರಿಂದ ರಾತ್ರಿ 10.00 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿದ್ದು ಹಿರಿಯ ಹಾಗೂ ನವ ಸಾಹಿತಿಗಳನ್ನು ರಾಜ್ಯದಾದ್ಯಂತ ಗುರುತಿಸುವ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹೊಸ ಸಾಹಿತಿಗಳಿಗೂ ವೇದಿಕೆಯನ್ನು ಒದಗಿಸಿಕೊಡಬೇಕು ಹಾಗೂ ಸಾಹಿತ್ಯ ಅಭಿರುಚಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಮೇ 7ರಂದು ನವ ಲೇಖಕರ ಮೇಳ, ಪ್ರಕಾಶಕರ ಮೇಳ ಹಾಗೂ ಸಾಮಾಜಿಕ ಬರಹಗಾರರ ಮೇಳ ಆಯೋಜಿಸಲಾಗಿದೆ. ಎಲ್ಲಾ ರೀತಿಯ ನೊಂದಣಿ ಮಾಡಿಕೊಳ್ಳಲು ಅತ್ಯಂತ ಶೀಘ್ರದಲ್ಲಿ ವೆಬ್‌ಸೈಟ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂಪೂರ್ಣ ಸಹಕಾರ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಜಿಲ್ಲಾ ಆಡಳಿತದ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.