ಬೆಂಗಳೂರು : ದಕ್ಷಿಣ ವಲಯದಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಯಾವುದೇ ಅನಾಹುತ ಆಗದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ವಿವಿಧ ಇಲಾಖೆಗಳ ಜೊತೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದ ವೇಳೆ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಲ್ಲಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಾಳಿ ಸಹಿತ ಮಳೆಯಾದ ವೇಳೆ ಸಾಕಷ್ಟು ಕಡೆ ಮರಗಳು, ರೆಂಬೆ-ಕೊಂಬೆಗಳು ಧರೆಗುರುಳಲಿವೆ. ಈ ಸಂಬಂಧ ಪಾಲಿಕೆಯ ಅರಣ್ಯ ಶಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸಮನ್ವಯದೊಂದಿಗೆ ಬಿದ್ದಂತಹ ಮರಗಳನ್ನು ಕೂಡಲೆ ತೆರವುಗೊಳಿಸಿ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು. ದಕ್ಷಿಣ ವಲಯ ವ್ಯಾಪ್ತಿಯ ಮಳೆ ನೀರುಗಾಲುವೆಗಳಲ್ಲಿ ಜಲಮಂಡಳಿಯ ಪೈಪ್‌ಗಳು ಅಡ್ಡಲಾಗಿರುವುದನ್ನು ಗುರುತಿಸಿ ಅವುಗಳನ್ನು ಬೇರೆಡೆ ಸ್ಥಳಾಂತರಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಈ ಪೈಕಿ ಜಲಮಂಡಳಿ ಇಲಾಖೆ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ದಕ್ಷಿಣ ವಲಯ ವ್ಯಾಪ್ತಿಯಲ್ಲಿ 10 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿದ್ದು, 8 ಕಡೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇನ್ನುಳಿದೆರಡು ಕಡೆ ತಾತ್ಕಾಲಿಕ ಪರಿಹಾರ ತೆಗೆದುಕೊಳ್ಳಲಾಗಿದ್ದು, ಮಳೆಗಾಲ ಪೂರ್ಣಗೊಂಡ ಬಳಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ವಲಯ ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯ್ಕ್, ಉಪ ಆಯುಕ್ತರಾದ ಲಕ್ಷ್ಮೀದೇವಿ, ಮುಖ್ಯ ಅಭಿಯಂತರರಾದ ರಾಜೇಶ್, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.