ವಿಜಯಪುರ : ವಿಜಯಪುರ ಜಿಲ್ಲೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಹಾಂಗ್‌ಕಾಂಗ್ ಮೂಲದ ಟಾಲ್ ಅಪಾರೆಲ್ಸ್ ಜವಳಿ ಹಾಗೂ ಸಿದ್ಧ ಉಡುಪು ಉತ್ಪಾದನಾ ಕಂಪನಿಯು 700 ರಿಂದ 800 ಕೋಟಿ ರೂ ಹೂಡಿಕೆ ಮಾಡಲು ಉತ್ಸುಕತೆ ತೋರಿರುವ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರೊಂದಿಗೆ ಬೆಂಗಳೂರಿನಲ್ಲಿ ನಿನ್ನೆ (ಶುಕ್ರವಾರ) ಸಭೆ ನಡೆಸಲಾಯಿತು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ.

ನಿನ್ನೆಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಂಪನಿ ನಿರ್ದೇಶಕರಿಗೆ ಮಾಹಿತಿ ಒದಗಿಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಪ್ರೋತ್ಸಾಹ ಹಾಗೂ ರಿಯಾಯಿತಿ ಕುರಿತು ವಿಸ್ತೃತವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜವಳಿ ಇಲಾಖೆಯ ಆಯುಕ್ತರಾದ ಟಿ ಎಚ್ ಎಂ ಕುಮಾರ್ ಹಾಗೂ ಕೆ ಐಎಡಿಬಿ ಸಿಇಒ ಡಾ. ಮಹೇಶ್ ಇಲಾಖಾ ಅಧಿಕಾರಿಗಳು ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟರು ಎಂದು ಹೇಳಿದರು. 

ಹಾಂಗ್‌ಕಾಂಗ್ ಟಾಲ್ ಅಪಾರೆಲ್ಸ್ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರಿಗೆ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳು ಮನವರಿಕೆಯಾದ ಹಿನ್ನೆಲೆಯಲ್ಲಿ ಇಂದು (ಜು.8)ರಂದು ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ (ಕೆಐಎಡಿಬಿ) ತಂಡ ಭೇಟಿ ನೀಡಿ ಪರಿವೀಕ್ಷಣೆ ನಡೆಸಿತು. ಜವಳಿ ಮತ್ತು ಸಿದ್ಧ ಉಡುಪು ಘಟಕ ಸ್ಥಾಪನೆಯಿಂದ ಐದರಿಂದ ಆರು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದ್ದಾರೆ.  

ಮುಳವಾಡ ಕೈಗಾರಿಕಾ ಪ್ರದೇಶಕ್ಕೆ (ಕೆಐಎಡಿಬಿ) ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಜವಳಿ ಇಲಾಖೆಯ ಆಯುಕ್ತರಾದ ಟಿ ಎಚ್ ಎಂ ಕುಮಾರ್, ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.