ಮೈಸೂರು :  ರಾಜ್ಯದ ಎಲ್ಲಾ ಮಹಿಳೆಯರಿಗೆ  ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲ ಬಸ್ಸುಗಳಲ್ಲಿ ಕರ್ನಾಟಕದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ವಿಧಾನ ಸೌಧದಲ್ಲಿ ನನ್ನನ್ನು ಒಳಗೊಂಡಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ,  ನಾಳೆ 1.00 ಗಂಟೆಯಿಂದ ಶಕ್ತಿ ಯೋಜನೆಗೆ  ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಜಾರಿಗೆ ಬರಲಿದೆ ಎಂದರು. 

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆ

ಮಳೆ ವಿಳಂಬವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸೋಮವಾರ ಎಲ್ಲಾ ಕುಡಿಯುವ ನೀರಿಗೆ ಸಂಬಂಧಿಸಿದ ಗ್ರಾಮೀಣ ಹಾಗೂ ನಗರ ಪ್ರದೇಶದ  ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.  ಮಳೆ ವಿಳಂಬವಾಗಿ ಸಮಸ್ಯೆ ಕಾಣಿಸಿದೆ  ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಕೂಡ ನಡೆಸಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳಿಗೆ ಚಾಲನೆ

ಗ್ಯಾರಂಟಿ ಯೋಜನೆಗಳನ್ನು ಜುಲೈ ಒಂದರಿಂದ ಕಲಬುರ್ಗಿ ಯಲ್ಲಿ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.  ಜುಲೈ ಒಂದರಿಂದ 10 ಕೆಜಿ ಆಹಾರಧಾನ್ಯ ಕೊಡುವುದು ಕೂಡ ಚಾಲನೆಯಾಗುತ್ತಿದೆ. ಅದನ್ನು ಬಹುತೇಕ ಮೈಸೂರು ಜಿಲ್ಲೆಯಲ್ಲಿ  ಮಾಡುತ್ತೇವೆ ಎಂದರು. 

ಗೃಹಲಕ್ಷ್ಮೀ ಯೋಜನೆ

ಗೃಹಲಕ್ಷ್ಮೀ ಯೋಜನೆಗೆ ಜೂನ್ 15 ರಿಂದ ಅರ್ಜಿ ಕರೆಯಲಾಗಿದೆ. ಜುಲೈ 15 ರಿಂದ ಆಗಸ್ಟ್ 15 ರವರೆಗೆ ಅದರ ಪ್ರಕ್ರಿಯೆ ಮುಗಿಸಿ 16 ನೇ ತಾರೀಖಿನಿಂದ  ಬಹುತೇಕವಾಗಿ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು. 2022- 23 ರಲ್ಲಿ ಉತ್ತೀರ್ಣರಾದ ಡಿಪ್ಲೊಮಾ ಹಾಗೂ ಪದವಿದಾದರು, 6 ತಿಂಗಳೂಳಗೆ ಕೆಲಸ ದೊರೆಯದಿದ್ದರೆ ಅವರಿಗೆ  24 ತಿಂಗಳು  ನಿರುದ್ಯೋಗ ಭತ್ಯೆ ನೀಡಲಾಗುವುದು.  ಡಿಕ್ಲರೇಷನ್ ಮಾಡುವಾಗ ಸುಳ್ಳು ಹೇಳಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ಕೆ.ಇ.ಆರ್.ಸಿ  ನಿರ್ಧಾರ

ವಿದ್ಯುತ್ ಬಿಲ್ ಹೆಚ್ಚು ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ  ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ವಿದ್ಯುತ್ ದರ ನಿಯಂತ್ರಣ ಮಾಡುವ ಕೆ.ಇ. ಆರ್.ಸಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ವಿದ್ಯುತ್ ದರವನ್ನು ಪ್ರತಿ ವರ್ಷ ಪರಿಷ್ಕರಣೆ ಮಾಡುತ್ತಾರೆ. ಜೂನ್  1 ರಿಂದ ಜಾರಿ ಮಾಡುತ್ತಾರೆ. ನಾವು ಅಧಿಕಾರಕ್ಕೆ ಬರುವ ಮುನ್ನವೇ ಇದು ಆಗಿದೆ. ಮಾರ್ಚ್ 29 ಕ್ಕೆ  ನೀತಿ ಸಂಹಿತೆ ಜಾರಿಯಾಗಿ ತಡೆಹಿಡಿದಿದ್ದರು ಎಂದರು. 

ಉಚಿತ ಪಡೆಯುವುದು ಕಡ್ಡಾಯವಿಲ್ಲ

200 ಯೂನಿಟ್ ವಿದ್ಯುತ್ ನ್ನು ಎಲ್ಲರೂ ತೆಗೆದುಕೊಳ್ಳಲೇಬೇಕು ಎಂದು ಕಡ್ಡಾಯವಿಲ್ಲ. ತೆಗೆದುಕೊಳ್ಳುವವರು ಪಡೆಯಬಹುದು. ಬೇಡ ಎನ್ನುವವರು ಕಟ್ಟಬಹುದು. ಎಲ್ಲರೂ 200 ಯೂನಿಟ್ ಬಳುವುದಿಲ್ಲ. ಒಂದು ವರ್ಷದಲ್ಲಿ ಬಳಕೆ ಮಾಡುವ ಯೂನಿಟ್ ಗಳ ಸರಾಸರಿ ಆಧರಿಸಿ ಶೇ. 10 ರಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರು. 

ರಾಜ್ಯಕ್ಕೆ  ಬರಬೇಕಿರುವುದನ್ನು ಒತ್ತಾಯಪೂರ್ವಕವಾಗಿ ಪಡೆಯಲಾಗುವುದು

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಎಲ್ಲವನ್ನೂ ಒತ್ತಾಯಪೂರ್ವಕವಾಗಿ  ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. 

ವ್ಯತ್ಯಾಸವಿಲ್ಲ

ಎರಡೇ ಬಾರಿ ಮುಖ್ಯಮಂತ್ರಿಯಾದ ನಂತರ ವರುಣ ಕ್ಷೇತ್ರಕ್ಕೆ ಮೊದಲ ಭೇಟಿ ನೀಡುತ್ತಿರುವ ಬಗ್ಗೆ  ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ' ನಾನೇನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿಲ್ಲ. ಹಾಗಾಗಿ ನನಗೆ ಯಾವುದೇ ವ್ಯತ್ಯಾಸ ವಾಗಿಲ್ಲ. ನಾನು ಏನಾದರೂ  ಯಾವಾಗಲೂ ಒಂದೇ ತರ ಇರುತ್ತೇನೆ' ಎಂದರು.