ಬೆಂಗಳೂರು, ನವೆಂಬರ್ 6, 2025:

ಬಿಐಎಸ್ ಪ್ರಮಾಣೀಕರಣ ಬಿಡುಗಡೆ; ಭಾರತದ ಅಗರಬತ್ತಿ ಉದ್ಯಮದ ಹೊಸ ಅಧ್ಯಾಯ ಆರಂಭ

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಅದ್ದೂರಿಯಾಗಿ ಆಯೋಜಿಸಿರುವ ಅಗರಬತ್ತಿ ಉದ್ಯಮದ ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿರುವ ಎಐಎಎಂಎ ಎಕ್ಸ್‌ಪೋ 2025 ಅನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು.

‘ಸಾಂಪ್ರದಾಯಿಕವಾಗಿ ಆಧುನಿಕ’ ಎಂಬ ವಿಷಯಯಾಧಾರಿತವಾಗಿ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಅಗರಬತ್ತಿಗಳಿಗೆ ಜಾಗತಿಕ ಮಟ್ಟದ ಗುಣಮಟ್ಟದ ಗುರುತನ್ನು ನೀಡುವ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು, “ಭಾರತೀಯ ಅಗರಬತ್ತಿ ಉದ್ಯಮವು ನಮ್ಮ ಸಂಸ್ಕೃತಿ ಮತ್ತು ಕುಶಲಕರ್ಮಿತನದ ಸಂಕೇತವಾಗಿದೆ. ಬಿಐಎಸ್ ಪ್ರಮಾಣೀಕರಣವನ್ನು ಪರಿಚಯಿಸುವ ಮೂಲಕ ನಾವು ಭಾರತೀಯ ಅಗರಬತ್ತಿ ಉತ್ಪನ್ನಗಳು ಅತ್ಯುನ್ನತ ಜಾಗತಿಕ ಗುಣಮಟ್ಟ ಹೊಂದಿರುವುದನ್ನು ಖಾತ್ರಿಪಡಿಸುತ್ತಿದ್ದೇವೆ. ಇದರಿಂದ ನಮ್ಮ ರಫ್ತು ಪ್ರಮಾಣ ಹೆಚ್ಚಲಿದೆ ಮತ್ತು ಭಾರತ ಅಗರಬತ್ತಿ ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಲ್ಲಲು ನೆರವಾಗುತ್ತದೆ” ಎಂದರು.

ಈ ಕುರಿತು ಎಐಎಎಂಎ ಅಧ್ಯಕ್ಷರು ಮತ್ತು ಅಂಬಿಕಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಂಬಿಕಾ ರಾಮಾಂಜನೇಯುಲು ಮಾತನಾಡಿ, “ಎಐಎಎಂಎ ಎಕ್ಸ್‌ಪೋ 2025 ನಮ್ಮ ಉದ್ಯಮದ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಕ್ಷಣವಾಗಿದೆ. ತಯಾರಕರು, ಸರಬರಾಜುದಾರರು ಮತ್ತು ಪರಿಣತರನ್ನು ಒಂದೇ ಕಡೆ ಸೇರಿಸಿ 25 ವರ್ಷಗಳ ಪರಪಂರೆಯನ್ನು ಸಂಭ್ರಮಸುವ ಸಂದರ್ಭ ಇದು” ಎಂದರು.

ಎಐಎಎಂಎ ಎಕ್ಸ್‌ಪೋ 2025ರ ಸಮಿತಿ ಅಧ್ಯಕ್ಷ ಮತ್ತು ಸೈಕಲ್ ಪ್ಯೂರ್ ಅಗರ್‌ಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗಾ ಅವರು ಮಾತನಾಡಿ, “ಈ ಎಕ್ಸ್‌ಪೋ ಅಗರಬತ್ತಿ ಉದ್ಯಮವು ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಉದ್ಯಮ ಪದ್ಧತಿಗಳ ಜೊತೆ ಸಂಯೋಜಿಸಿ ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ಸಾರುತ್ತಿದೆ. ಈ ಮೂಲಕ ತಯಾರಕರು ಸಬಲೀಕರಣಗೊಳ್ಳುವುದಲ್ಲದೆ ಭಾರತವು ಸುಗಂಧ ದ್ರವ್ಯ ಸೃಷ್ಟಿಯ ಜಾಗತಿಕ ಕೇಂದ್ರವಾಗಿ ಮತ್ತಷ್ಟು ಗಟ್ಟಿಯಾಗಲಿದೆ” ಎಂದು ಹೇಳಿದರು.

ಈ ಎಕ್ಸ್‌ಪೋದಲ್ಲಿ ಉದ್ಯಮ ತಜ್ಞರು, ಪರಿಣತರು ಮತ್ತು ಚಿಂತಕರು ಭಾಗವಹಿಸಲಿದ್ದು, ಸುಗಂಧ, ಸುಸ್ಥಿರತೆ ಮತ್ತು ಉದ್ಯಮಶೀಲತೆ ಕುರಿತ ಗೋಷ್ಠಿಗಳು ನಡೆಯಲಿವೆ. ಉದ್ಘಾಟನಾ ದಿನದಂದು ಭಾರತದ ಪ್ರಸಿದ್ಧ ಪೌರಾಣಿಕ ತಜ್ಞ ದೇವದತ್ತ್ ಪಟ್ಟನಾಯಕ್ ಭಾಗವಹಿಸಿ ಭಾರತೀಯ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯಲ್ಲಿ ಸುಗಂಧದ ಪಾತ್ರದ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಿಸಿನೆಸ್ ಕೋಚ್ ರಾಜೀವ್ ತಲ್ರೇಜಾ ಕುಟುಂಬಗಳು ನಡೆಸುವ ಉದ್ಯಮಗಳನ್ನು ವಿಸ್ತರಿಸುವ ಕುರಿತು ಮಾತನಾಡಲಿದ್ದಾರೆ. ವಿಶೇಷವಾಗಿ ‘ನೋಸ್ ರಾಯಲ್’ ಪರ್ಫ್ಯೂಮ್ ಸೃಷ್ಟಿ ಸ್ಪರ್ಧೆ ನಡೆಯಲಿದೆ.

1,20,000 ಚದರ ಅಡಿ ವಿಸ್ತೀರ್ಣದಷ್ಟು ವಿಶಾಲ ಜಾಗದಲ್ಲಿ ನಡೆಯುತ್ತಿರುವ ಈ ಎಕ್ಸ್‌ಪೋದಲ್ಲಿ ಅಗರಬತ್ತಿ ಉದ್ಯಮಕ್ಕೆ ಸಂಬಂಧಿಸಿದ ಹಲವು ಸೆಮಿನಾರ್‌ಗಳು ನಡೆಯಲಿವೆ. ಉದ್ಯೋಗ ಸೃಷ್ಟಿ, ಕಚ್ಚಾ ವಸ್ತುಗಳ ಮೂಲ, ಹೊಸ ಸುಗಂಧಗಳ ಸಂಶೋಧನೆ, ಪ್ಯಾಕೇಜಿಂಗ್ ಅಭಿವೃದ್ಧಿ, ಮಹಿಳಾ ಸಬಲೀಕರಣ, ರಫ್ತು ಅವಕಾಶಗಳು ಮತ್ತು ಹೊಸ ಯುಗದ ಮಾರ್ಕೆಟಿಂಗ್ ಇತ್ಯಾದಿ ವಿಷಯಗಳ ಕುರಿತು ಗೋಷ್ಠಿ ನಡೆಯಲಿವೆ.