ಬೆಂಗಳೂರು, ಮಾರ್ಚ್ 28, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಹರಿಹರ ಆನಂದಸ್ವಾಮಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರ ಈ ಕೂಡಲೇ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು 'ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ' ಸದಸ್ಯರು ಒತ್ತಾಯಿಸಿದರು. 

ಒಳ ಮೀಸಲಾತಿ ಹಿನ್ನೆಲೆಯಲ್ಲಿ ದಲಿತಪರ ಚಳವಳಿಗಳು ತಮ್ಮನ್ನು ತಾವು ಸ್ವ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದದ್ದು ಇಂದಿನ ಅದ್ಯ ಸಂಗತಿಯಾಗಿದೆ. ಗೆಳೆಯರೇ. ಪ್ರಸ್ತುತ ಒಳ ಮೀಸಲಾತಿಯ ಹುಯ್ದು ಕರ್ನಾಟಕದಾದ್ಯಂತ ಧೂಳೆಬ್ಬಿಸಿದೆ. ಸ್ನೇಹಿತರೆ, ಒಳ ಮೀಸಲಾತಿಯ ಮೂಲ ಆಶಯ ಯಾರು ಅಸ್ಪೃಶ್ಯರಾಗಿದ್ದು ಅತ್ಯಂತ ಸಂಕಷ್ಟದಲ್ಲಿ ಬದುಕುತ್ತಿರುವರೊ ಅಂತಹವರ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುನರುಜ್ಜಿವನಕ್ಕಾಗಿ ಹಾಗೂ ಕಾಂಗ್ರೆಸ್ ಮತ್ತು ಮಹಾತ್ಮಗಾಂಧಿರವರ ಒಡಂಬಡಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಮತದಾನದ ಹೊರತಾಗಿ ಮೀಸಲಾತಿ ಅಸ್ತಿತ್ವಕ್ಕೆ ತರಲಾಗಿದೆ. ಆದರೆ, ಸ್ವಾತಂತ್ರ್ಯಾನಂತರದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದ ಆಳುವ ವರ್ಗ ತನ್ನ ಬೆಳೆ ಆಶಯಗಳ ಈಡೇರಿಕೆಗಾಗಿ ಅಸ್ಪೃಶ್ಯರ ಮೀಸಲಾತಿ ಸಂಗತಿಯನ್ನು ವಿಕೃತಗೊಳಿಸಿದ್ದು ವಿಪರ್ಯಾಸವೇ ಸರಿ.

ನಂತರದಲ್ಲಿ ಮೀಸಲಾತಿ ಸಂಗತಿ ರಾಜಕೀಯ ಪಕ್ಷಗಳ ಓಟಿನ ರಾಜಕಾರಣಕ್ಕೆ ದುರ್ಬಳಕೆಯಾಗಿ ಅಸ್ಪೃಶ್ಯರೊಟ್ಟಿಗೆ ಇತರೆ ಶೋಷಿತ ಸಮುದಾಯಗಳನ್ನೂ ಸೇರಿಸಿ ನೂರೊಂದು ಜಾತಿಗಳ ಪಟ್ಟಿಯನ್ನು ಮಾಡಿ ರಾಜಕೀಯ ದಾಳವಾಗಿ ಬಳಸಲಾಗಿದೆ. ಅಂದಿನಿಂದ ಇಂದಿನವರೆಗೂ ಈ ಷಡ್ಯಂತ್ರಕ್ಕೆ ಬಲಿಯಾದ ಮೀಸಲಾತಿ ಸಂಗತಿ ಪ್ರಸ್ತುತ ವಿವಾದದ ಸಂಗತಿಯಾಗಿದೆ. ಅಸ್ಪೃಶ್ಯರಲ್ಲಿ ಪ್ರಮುಖರಾಗಿರುವ ಎಡ-ಬಲ ಸಮುದಾಯಗಳ ನಡುವಿನ ಕಂದಕಕ್ಕೆ ಕಾರಣವಾಗಿದೆ. ಮೀಸಲಾತಿ ಹಿನ್ನೆಲೆಯಲ್ಲಿ ಅಸ್ಪೃಶ್ಯರಾದ ಎಡ-ಬಲ ಸಮುದಾಯಗಳ ನಡುವೆ ಗೊಂದಲ ಸೃಷ್ಟಿಯಾಗಿದ್ದು ಉಪಜಾತಿಗಳಲ್ಲಿಯೂ ರಾಜಕಾರಣದ ಕೊಳಕು ಆಮಿಷ ಹುಟ್ಟಿಕೊಂಡಿರುವುದು ದುರಂತವೇ ಸರಿ.

ಹಳ್ಳಿಗಾಡಿನ ಓದು-ಬರಹ ಇಲ್ಲದ ಅಸ್ಪಶ್ಯರು ತಮ್ಮ ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ತಮ್ಮ ಬದುಕಿನ ಭೀಕರ ಚಿತ್ರಣವನ್ನು ಒಂದು ಉಪಮೆ ಹೇಳುವ ಮುಖಾಂತರ ತೆರೆದಿಡುತ್ತಾರೆ. ಅಂದರೆ ಈ ಸಮಾಜ ಅಸ್ಪೃಶ್ಯರನ್ನು ಚಪ್ಪಲಿಗೆ ಹೋಲಿಸಿ, ಚಪ್ಪಲಿಗಳನ್ನು ಹೊರಬಿಟ್ಟು ಬನ್ನಿ ಎಂದು ಹೇಳುತ್ತಾರೆ. ಹಾಗೆಯೇ, ಅಸ್ಪೃಶ್ಯ ಎಡ-ಬಲ ಜಾತಿಗಳನ್ನು ಸಮಾನವಾಗಿ ದೂರದಲ್ಲಿಟ್ಟು ಚಪ್ಪಲಿಗಳಂತೆ ಹೊರಗಿಟ್ಟಿದ್ದಾರೆ. ಎರಡೂ ಸಮೂಹಗಳು ಈ ದುರಂತ ಸ್ಥಿತಿಯನ್ನು ಅರಿತುಕೊಳ್ಳದಿದ್ದರೆ ಪ್ರಗತಿ ಮರೀಚಿಕೆಯೇ ಸರಿ.

ಮಾನ್ಯರೆ, ಸರ್ಕಾರಗಳು ಸದಾಕಾಲ ಬಹುಸಂಖ್ಯಾತ ಅಸ್ಪೃಶ್ಯ ಸಮೂಹವನ್ನು ಓಟಿನ ಸಮೂಹವಾಗಿಯೇ ನೋಡುತ್ತಿದ್ದು ತಮ್ಮ ತಾಳ ಮತ್ತು ದಾಳಕ್ಕೆ ತಕ್ಕಂತೆ ಕುಣಿಸುವ ಷಡ್ಯಂತ್ರ ರೂಪಿಸುತ್ತಲೇ ಇವೆ. ಇದಕ್ಕೆ ಪೂರಕವಾಗಿ ಆಯೋಗಗಳ ಮೇಲೆ ಆಯೋಗಗಳು ನೇಮಕವಾಗುತ್ತಿವೆ. ಹೀಗೆ ನೇಮಕವಾದ ಆಯೋಗಗಳು ಪ್ರಸ್ತುತ ಮೀಸಲಾತಿ ಸಮಸ್ಯೆಗೆ ವೈಜ್ಞಾನಿಕ ಪರಿಹಾರವಲ್ಲ ಎನ್ನುವುದನ್ನು ಅಸ್ಪೃಶ್ಯ ಸಮೂಹಗಳು ಇದನ್ನು ಮನಗಾಣಬೇಕಾಗಿದೆ.

ಬಾಬಾ ಸಾಹೇಬರು ಮಾರ್ಗದರ್ಶಕರಾಗಿದ್ದ ನಮ್ಮೊಳಗಿನ ಅಸ್ಪೃಶ್ಯ (ಎಡ-ಬಲ) ಸಮೂಹಗಳ ಸ್ವಾಭಿಮಾನದ ಸ್ತರ ಶಿಥಿಲಗೊಂಡಿದ್ದು, ವೈದಿಕಶಾಹಿ ಕುತಂತಕ್ಕೆ ಬಲಿಬಿದ್ದುದರಿಂದಾಗಿ ಅಸ್ಪೃಶ್ಯರ ನಡುವಿನ ಭಿನ್ನಾಭಿಪ್ರಾಯ ಬೀದಿ ರಂಪವಾಗುತ್ತಿದೆ. ಆದ್ದರಿಂದ ಅಸ್ಪಶ್ಯರೊಳಗಿನ ಪಾಜ್ಞೆ ಸರಕಾರಿ ಅಧಿಕಾರಿಗಳು-ರಾಜಕಾರಣಿಗಳು werb ಯುವಶಕ್ತಿಗಳು ಒಟ್ಟುಗೂಡಿ 22-20 ಕಲಹಕ್ಕೆ ಅಂತ್ಯ ಹಾಡಬೇಕಾಗಿದೆಯಾದ್ದರಿಂದ ನಮ್ಮೊಳಗಿನ ಪ್ರಾಜ್ಞ ಸಮರ್ಥ ನೆಲಹತ್ತಿದ ಸಹೋದರರ ವಿಮೋಚನೆಗೆ ಸ್ವಲ್ಪ ಮಟ್ಟಿನ ತ್ಯಾಗಕ್ಕೆ ಸಿದ್ದರಾಗಲೇಬೇಕಾಗಿದೆ. ಇಲ್ಲವಾದಲ್ಲಿ ಮೇಲ್ಸ್ತರದವರ ಕುತಂತ್ರ ರಾಜಕಾರಣಕ್ಕೆ ಬಲಿಯಾಗುತ್ತೇವೆ.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದಿನ ಅವಧಿಯಲ್ಲಿ EWS ಹೆಸರಿನಲ್ಲಿ ಜಾರಿಗೊಳಿಸಿದ ಮೀಸಲಾತಿಗೆ ದೇಶದ ಮೀಸಲಾತಿಪರ ಚಳವಳಿಗಳು ತೋರಿದ ಮಹಾಮೌನ ನಿಜಕ್ಕೂ ಆಘಾತಕಾರಿ. ಯಾವುದೇ ಬೇಡಿಕೆ, ಆಗ್ರಹ, ಧರಣಿ, ಹೋರಾಟಗಳಿಲ್ಲದೆ ಸುಲಲಿತವಾಗಿ 10% ಮೀಸಲಾತಿ ಧಕ್ಕಿಸಿಕೊಂಡ ಹಿಂದೂ ಶ್ರೇಣೀಕೃತ ವ್ಯವಸ್ಥೆಯ ಮೇಲ್ವರ್ಗಗಳ ಕುರಿತಾಗಿ ಜಾಣಮರೆವು ತೋರುವ ನಾವು ಹತ್ತಾರು ವರ್ಷಗಳಿಂದ ಒಳ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಸಹೋದರ ಸಮುದಾಯಗಳ ಕುರಿತಾಗಿ ತಳೆದಿರುವ ಅವಜ್ಞೆ ನಿಜಕ್ಕೂ ಆಷಾಡಭೂತಿತನದ್ದು. ಒಳಮೀಸಲಾತಿಯ ಈ ಹೋರಾಟ ತಾರ್ಕಿಕ ಅಂಶವನ್ನು ಕಾಣಬಹುದಾದ ದಿನಗಳಲ್ಲಾದರೂ ತಾವು ತಮ್ಮ ನಡುವಿನ ಕ್ಷೇಷಗಳನ್ನು ಬದಿಗಿಟ ಜನಸಂಖ್ಯೆಗನುಗುಣವಾಗಿ ಮೀಸಲಾತಿಯ ಹಂಚಿಕೆಗಾಗಿ ಆಗ್ರಹಿಸುತ್ತಿರುವ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕಿದೆ.

ಇಲ್ಲವಾದಲ್ಲಿ ಮೇಲ್ದಾತಿ ಮತ್ತು ಮೇಲ್ಸ್ತರದ ರಾಜಕಾರಣದೊಟ್ಟಿಗೆ ನಮ್ಮ ಎಡ-ಬಲದ ಸಮಯ ಸಾಧಕ ರಾಜಕಾರಣಿಗಳ ತಂತ್ರಕ್ಕೆ ಬಲಿಯಾಗುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಅಸ್ಪೃಶ್ಯ ಸಮಾಜ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುವುದು ಕಟ್ಟಿಟ್ಟಬುತ್ತಿಯಾಗಿದೆ. ದಯವಿಟ್ಟು ಅಸ್ಪೃಶ್ಯರೊಳಗಿನ ಉಳ್ಳವರು ಉದಾರತೆಯನ್ನು ಮೆರೆಯಲೇಬೇಕಾದ ಸನ್ನಿವೇಶದ ಅನಿವಾರ್ಯತೆ ಪ್ರಸ್ತುತ ಉದ್ಭವಿಸಿದೆ. ಹೊರತಾಗಿ ಯಾವ ಆಯೋಗಗಳಿಂದಲೂ ನಮ್ಮಗಳ ಮುಂದೆ ಇರುವ ಮೀಸಲಾತಿ ಸಮಸ್ಯೆಗೆ ಪರಿಹಾರವಿಲ್ಲ. ದಯವಿಟ್ಟು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಸ್ಪೃಶ್ಯ (ಎಡ-ಬಲ) ಬಂಧುಗಳೇ...

ಸಣ್ಣ ಮನಸ್ಸಿನ ದೊಡ್ಡ ಜನರಿಂದ ಒಂದು ದೇಶ ಕಟ್ಟಲು ಸಾಧ್ಯವಿಲ್ಲ; ಅದೇನಿದ್ದರೂ ದೊಡ್ಡ ಮನಸ್ಸಿನ ಸಣ್ಣ ಜನರಿಂದ ಮಾತ್ರ ಒಂದು ದೇಶ ಕಟ್ಟಲು ಸಾಧ್ಯ.