ಬೆಂಗಳೂರು, ಮಾರ್ಚ್ 18, 2025

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ'ದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ಸ್ಮಾರ್ಟ್ ಮೀಟರ್ ದರ ₹950 ರಿಂದ 15 ಸಾವಿರಕ್ಕೆ ಏರಿಕೆ ಮಾಡಿರುವುದನ್ನು ಖಂಡಿಸಿದರು. 

ಹಿಂದಿನ ದರದಂತೆಯೇ ಸ್ಮಾರ್ಟ್ ಮೀಟರ್‌ಗಳನ್ನು ಮಾರಾಟ ಮಾಡಲು 3 ತಿಂಗಳ ಕಾಲಾವಕಾಶ ನೀಡಬೇಕು. ಬೆಸ್ಕಾಂ ವ್ಯಾಪ್ತಿಯ ಕಚೇರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಬೇಕು. ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕ ಹೆಚ್ಚಿಸಿರುವುದು ಖಂಡನೀಯ ಎಂದು ಪ್ರತಿಭಟನನಾಕಾರರು ತಿಳಿಸಿದರು.

'ಎರಡನೇ ದರ್ಜೆಯ ಗುತ್ತಿಗೆ ಪರವಾನಗಿ ಪಡೆದಿರುವ ವಿದ್ಯುತ್ ಗುತ್ತಿಗೆದಾರರಿಗೆ ಪ್ರಥಮ ದರ್ಜೆಯ ಗುತ್ತಿಗೆ ಪರವಾನಗಿ ಪಡೆಯಲು ನಿಗದಿಪಡಿಸಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಯಿಂದ ವಿನಾಯಿತಿ ನೀಡಬೇಕು. ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆಯ ವಿದ್ಯುತ್ ಗುತ್ತಿಗೆ ಪರವಾನಗಿ ನೀಡಬೇಕು. 2 ಮೆಗಾವಾಟ್ ಹಾಗೂ ಅದಕ್ಕಿಂತ ಹೆಚ್ಚಿನ ಮೆಗಾವಾಟ್ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು' ಎಂದು ಆಗ್ರಹಿಸಿದರು.

'ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಕೃಷಿ ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಸಂಘದ ಅಧ್ಯಕ್ಷ ವೈ.ಎಚ್. ಆನಂದ್ ಒತ್ತಾಯಿಸಿದರು.

  ಈ ಪ್ರತಿಭಟನೆ ಅಧ್ಯಕ್ಷರಾದ ವೈ.ಎಚ್. ಆನಂದ್ ಅವರ ನೇತೃತ್ವದಲ್ಲಿ ನಡೆಯಿತು. ಈ ಪ್ರತಿಭಟನೆಯಲ್ಲಿ 2000 ಕ್ಕೂ ಹೆಚ್ಚು ವಿದ್ಯುತ್ ಗುತ್ತಿಗೆದಾರರು ಭಾಗಿಯಾಗಿದ್ದರು.