ಬೆಂಗಳೂರು, ಮಾರ್ಚ್ 5, 2025:

ಇಂದಿರಾಗಾಂಧಿ ರಾಷ್ಟೀಯ ಮುಕ್ತ ವಿಶ್ವವಿದ್ಯಾಲಯ (IGNOU)ದ ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ 38ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಿತು. 

ಘಟಿಕೋತ್ಸವ ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಪ್ರಮುಖ ಅತಿಥಿಯಾಗಿ ಭಾಗಿಯಾಗಿದ್ದರು. 

ಈ 38ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾದ ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಧಮೇರ್ಂದ್ರ ಪ್ರಧಾನ್ ರವರೇ, IGNOU ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಎಂ. ಶಣ್ಮುಗಂ ರವರೇ, ಅಧಿಕಾರಿವರ್ಗದವರೇ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೇ, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳೇ, ಪೋಷಕರೇ, ಗೌರವಾನ್ವಿತ ಅತಿಥಿಗಳೇ, ಮಾಧ್ಯಮ ಮಿತ್ರರೇ, ಮಹಿಳೆಯರೇ ಮತ್ತು ಮಹನೀಯರೇ.

ಇಂದು ನಡೆಯುತ್ತಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ಬೆಂಗಳೂರು ಪ್ರಾದೇಶಿಕ ಕೇಂದ್ರದ ಈ ಮಹತ್ವಪೂರ್ಣ ಘಟಿಕೋತ್ಸವ ಸಮಾರಂಭದಲ್ಲಿ ನಾನು ನಿಮ್ಮ ಮುಂದೆ ಕೃತಜ್ಞತಾಪೂರ್ವಕವಾಗಿ ಬಹಳ ಸಂತೋಷ, ಮತ್ತು ಹೆಮ್ಮೆಯಿಂದ ನಿಂತಿದ್ದೇನೆ. ಈ ಮಹತ್ವದ ಸಂದರ್ಭದ ಆಚರಣೆಯು ಕೇವಲ ನಿಮ್ಮ ಶೈಕ್ಷಣಿಕ ಪ್ರಯಾಣದ ಅಂತ್ಯವನ್ನಷ್ಟೇ ಅಲ್ಲ, ಬದಲಿಗೆ ನಿಮ್ಮ ಜೀವನದ ಹೊಸ ಅಧ್ಯಾಯದ ಆರಂಭವನ್ನು ಸಹ ಸೂಚಿಸುತ್ತದೆ. ಈ ಘಟಿಕೋತ್ಸವವು ಕೇವಲ ಒಂದು ಸಮಾರಂಭವಲ್ಲ; ಇದು ಜ್ಞಾನ, ಪರಿಶ್ರಮ ಮತ್ತು ಶಿಕ್ಷಣದ ಪರಿವರ್ತನಾತ್ಮಕ ಶಕ್ತಿಯ ಸಂಭ್ರಮಾಚರಣೆಯಾಗಿದೆ. ಈ ಮಹತ್ತರ ಮೈಲಿಗಲ್ಲಿನ ಮೇಲೆ ಪ್ರತಿಫಲಿಸುವ ಈ ಸಂದರ್ಭದಲ್ಲಿ ನಾನು ವಿಶ್ವವಿದ್ಯಾಲಯ ಎಂದರೆ ಏನು? ಶಿಕ್ಷಣದ ಉದ್ದೇಶವೇನು? ಮತ್ತು ಸಮಾಜ ಮತ್ತು ಜೀವನವನ್ನು ರೂಪಿಸುವಲ್ಲಿ IGNOU ವಹಿಸಿರುವ ವಿಶಿಷ್ಟ ಪಾತ್ರವೇನು? ಎಂಬುದರ ಬಗ್ಗೆ ಕೆಲವು ಹೊಳಹುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU)

ಈ ನಿಟ್ಟಿನಲ್ಲಿ, IGNOU ಉನ್ನತ ಶಿಕ್ಷಣದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಇದು ಉನ್ನತ ಶಿಕ್ಷಣವನ್ನು ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಿದ್ದು ಮಾತ್ರವಲ್ಲ, ಉನ್ನತ ಶಿಕ್ಷಣದ ವ್ಯಾಖ್ಯಾನವನ್ನೇ ವಿಸ್ತರಿಸಿದೆ. ಮುಕ್ತ, ದೂರಶಿಕ್ಷಣ ಮತ್ತು ಆನ್‌ಲೈನ್ ಕಲಿಕೆಯಿಂದ (ODL), IGNOU ಭೌಗೋಳಿಕ ಅಡೆತಡೆಗಳು, ವಯಸ್ಸಿನ ಮಿತಿಗಳು, ಆರ್ಥಿಕ ಅಡಚಣೆಗಳು ಮತ್ತು ಸಾಮಾಜಿಕ ಅಸಮಾನತೆಗಳನ್ನೂ ಮೀರಿದೆ. ಪದವಿ ಕಾಲೇಜುಗಳಿಗೆ ಹೋಗಲು ಸಾಧ್ಯವಾಗದವರಿಗೂ ಇದು ಶಿಕ್ಷಣವನ್ನು ತಲುಪಿಸಿ, ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿದೆ. ಇಂದು, IGNOU ವಿಶ್ವದ ಅತಿದೊಡ್ಡ ಮುಕ್ತ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ, 3.5 ದಶಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಇದು 21 ಅಧ್ಯಯನ ಶಾಲೆಗಳ ಮೂಲಕ ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಡಾಕ್ಟರಲ್ ಮಟ್ಟಗಳಲ್ಲಿ 250 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಿದೆ. 67 ಪ್ರಾದೇಶಿಕ ಕೇಂದ್ರಗಳು ಮತ್ತು 2,000 ಕ್ಕೂ ಹೆಚ್ಚು ಕಲಿಕಾ ಸಹಾಯ ಕೇಂದ್ರಗಳೊಂದಿಗೆ, IGNOU ನಿಜವಾದ ಅರ್ಥದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಆಶಾಕಿರಣವಾಗಿದೆ.

ಆದರೆ IGNOU ಸಾಧನೆಯನ್ನು ಕೇವಲ ಸಂಖ್ಯೆಗಳ ಲೆಕ್ಕದಲ್ಲಿ ಮಾತ್ರವಲ್ಲ; ಅದು ಬೀರಿರುವ ಪ್ರಭಾವದ ಆಧಾರದ ಮೇಲೂ ಹೇಳಬಹುದು. ಇದು ಮಹಿಳೆಯರಿಗೆ ಕುಟುಂಬ ಮತ್ತು ವೃತ್ತಿಜೀವನವನ್ನು ಸಮತೋಲನಗೊಳಿಸುತ್ತಾ ಶಿಕ್ಷಣ ಮುಂದುವರಿಸುವ ಶಕ್ತಿಯನ್ನು ನೀಡಿದೆ. ಇದು ಕೆಲಸ ಮಾಡುವ ವೃತ್ತಿಪರರಿಗೆ ಹೊಸ ಕೌಶಲ್ಯಗಳನ್ನು ಕಲಿಸುವ ಮೂಲಕ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಅವರನ್ನು ಪ್ರಸ್ತುತರಾಗಿರಲು ಸಹಾಯ ಮಾಡಿದೆ. ಗ್ರಾಮೀಣ ವಿದ್ಯಾರ್ಥಿಗಳು, ಆದಿವಾಸಿಗಳು ಮತ್ತು ಭಿನ್ನ ಸಾಮರ್ಥ್ಯದ ವ್ಯಕ್ತಿಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೂ ಶಿಕ್ಷಣವನ್ನು ತಲುಪಿಸಿದೆ. ಇದು ಶಿಕ್ಷಣವನ್ನು ಕೈದಿಗಳು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ವಿಸ್ತರಿಸಿದೆ. ಅವರು ಸಮಾಜದಲ್ಲಿ ಮತ್ತೆ ಒಂದಾಗಲು ಸಹಾಯ ಮಾಡಿದೆ. IGNOU ಕೇವಲ ಒಂದು ವಿಶ್ವವಿದ್ಯಾಲಯವಷ್ಟೇ ಅಲ್ಲ; ಇದು ಶಿಕ್ಷಣ, ಸಶಕ್ತಿಕರಣ ಮತ್ತು ಉತ್ತಮ ನಾಳೆಯನ್ನು ರಚಿಸಲು ವ್ಯಕ್ತಿಗಳಿಗೆ ಅವಕಾಶಗಳನ್ನು ನೀಡುವ ಒಂದು ಮಹತ್ವಾಕಾಂಕ್ಷಿ ಗುರಿ.