ಬೆಂಗಳೂರು, ಫೆಬ್ರವರಿ 20, 2025
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲ್ಲುಕಂಬ ಪಂಪಾಪತಿ ಅವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲು ಮನವಿ ಸಲ್ಲಿಸಿದರು. ಅವರು ತಮ್ಮ ಹಲವು ದಶಕಗಳ ಕಾಂಗ್ರೆಸ್ ನಿಷ್ಠೆ, ತ್ಯಾಗ, ಹಾಗೂ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ಅವರು ಕಾಂಗ್ರೆಸ್ ಪಕ್ಷದ ಪರವಾಗಿ ನಿರಂತರವಾಗಿ ಶ್ರಮಿಸಿದರೂ ರಾಜಕೀಯವಾಗಿ ಕಡೆಗಣನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. “ನಾನು ಕೃಷಿಕ ಕುಟುಂಬದಲ್ಲಿ ಹುಟ್ಟಿ, ನನ್ನ ಜೀವನವನ್ನೆಲ್ಲಾ ಕಾಂಗ್ರೆಸ್ ಪಕ್ಷದ ಸೇವೆಗೆ ಮೀಸಲಿಟ್ಟಿದ್ದೇನೆ. ನನ್ನ ಕುಟುಂಬ ರಾಜೀವ್ ಗಾಂಧಿ, ಸಂಜಯ್ ಗಾಂಧಿ ಅವರಂತಹ ನಾಯಕರಿಗೆ ಅಚ್ಚುಮೆಚ್ಚಾಗಿದ್ದು, ನನ್ನ ಮನೆಯ ನಾಮಕರಣವನ್ನೂ ‘ಗಾಂಧಿ ನಿವಾಸ’ ಎಂದು ಮಾಡಿದ್ದೇನೆ. ಆದರೆ, ನಾನು ಯಾವುದೇ ಅಧಿಕಾರಕ್ಕೇರದಿದ್ದು ನನಗೆ ವಿಪರ್ಯಾಸವಾಗಿದೆ,” ಎಂದು ಪಂಪಾಪತಿ ತಮ್ಮ ಮನನೊಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮುಂದೆ ತಮ್ಮ ದೀರ್ಘಕಾಲದ ಸೇವೆಯನ್ನು ಪರಿಗಣಿಸಿ ಕನಿಷ್ಠ ಒಂದು ಬಾರಿ ವಿಧಾನ ಪರಿಷತ್ ಸ್ಥಾನ ನೀಡುವಂತೆ ಮನವಿ ಮಾಡಿದರು. “ಪಕ್ಷದ ನಿಷ್ಠಾವಂತರಿಗೆ, ತ್ಯಾಗಶೀಲ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ನನ್ನ ಸೇವೆಗೆ ಕನಿಷ್ಟ ಕೂಲಿಯಾಗಿ ಒಂದು ಅವಕಾಶ ಸಿಕ್ಕಬೇಕು,” ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆಯ ವಿಚಾರ
1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿದ ಸಂದರ್ಭದಲ್ಲಿ, ಅವರ ವಿರುದ್ಧ ದುಷ್ಟ ಪ್ರಚಾರ ನಡೆಸಿದ ಕೆಲವರು ಈಗ ಪಕ್ಷದ ಮಹತ್ವದ ಹುದ್ದೆಗಳಲ್ಲಿ ಸ್ಥಾನ ಪಡೆದಿರುವುದು ನೋವಿನ ಸಂಗತಿ ಎಂದು ಅವರು ವ್ಯಥೆ ವ್ಯಕ್ತಪಡಿಸಿದರು. “ಆಗ ಕಾಂಗ್ರೆಸ್ ಪಕ್ಷವನ್ನು ವಿರುದ್ಧವಾಗಿ ಅವಹೇಳನ ಮಾಡಿದವರೇ ಈಗ ಪಕ್ಷದ ದೊಡ್ಡ ಹುದ್ದೆಗಳಲ್ಲಿ ಇರುವುದು ನೋಚಿಸುವ ಸಂಗತಿಯಾಗಿದೆ. ಶ್ರದ್ಧಾವಂತ ಕಾಂಗ್ರೆಸ್ಸಿಗರಿಗೆ ನ್ಯಾಯ ದೊರಕಬೇಕಾದರೆ, ಪಕ್ಷದ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು,” ಎಂದು ಅವರು ಅಭಿಪ್ರಾಯಪಟ್ಟರು.
ಪಕ್ಷದ ಭವಿಷ್ಯ ಮತ್ತು ಸಂಘಟನೆಯ ಭದ್ರತೆಯ ದೃಷ್ಟಿಯಿಂದ ನಿಷ್ಠಾವಂತ ಹಾಗೂ ಕಾರ್ಯನಿಷ್ಠರ ಸೇವೆಗೆ ನ್ಯಾಯ ನೀಡುವಂತೆ ಅವರು ಎಐಸಿಸಿ ಹಾಗೂ ಕೆಪಿಸಿಸಿ ಮುಖಂಡರನ್ನು ವಿನಂತಿಸಿದರು.