ಬೆಂಗಳೂರು, ಫೆಬ್ರವರಿ 18, 2025:

 ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ,ಹಾಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಗಿರೀಶ್. ಕೆ. ನಾಶಿ ಎಂಬುವವರು ಗುತ್ತಿಗೆ ಆಧಾರದ ಮೇಲೆ ಪಡೆದಿರುವ ಶಿವಾಜಿನಗರದ ಮಾಲ್ ವೊಂದರ ಕೋಟ್ಯಾಂತರ ರೂಪಾಯಿ ತೆರಿಗೆಯನ್ನು ಪಾವತಿಸದ ಹಿನ್ನಲೆಯಲ್ಲಿ ಬಿಬಿಎಂಪಿ ಮಾಲ್ ಗೆ ಬೀಗ ಜಡಿದಿದ್ದರಿಂದ ನೂರಾರು ಮಳಿಗೆಗಳ ಮಾಲೀಕರು ಬೀದಿಗೆ ಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.

 ಶಿವಾಜಿನಗರದ ಪ್ಯಾಲೇಸ್ ಮಾಲ್‌ ಗುತ್ತಿಗೆ ಮಾಲೀಕತ್ವ ಹೊಂದಿರುವ ಗಿರೀಶ್ .ಕೆ.ನಾಶಿ ಬಿಬಿಎಂಪಿಗೆ ಸುಮಾರು ಎರಡು ಕೋಟಿ ರೂಪಾಯಿ ತೆರಿಗೆ ಹಣವನ್ನು ಕಟ್ಟದೇ ಇದ್ದುದರಿಂದ ಬಿಬಿಎಂಪಿ ವಿಶೇಷ ಆಯುಕ್ತರು ಮಾಲ್ ಮಳಿಗೆಗಳನ್ನು ಬಂದ್ ಮಾಡಿದ್ದರಿಂದ ಮಾಲೀಕರು ಬೀದಿಗೆ ಬಿದ್ದಿದ್ದು ಅವರ ಗೋಳನ್ನು ಯಾರು ಕೇಳದಂತಾಗಿದೆ. ಈ ಕುರಿತು ಗಿರೀಶ್. ಕೆ.ನಾಶಿ ಅವರನ್ನು ಸಂಪರ್ಕಿಸಲು ಮುಂದಾದರೆ ಯಾರ ಕೈಗೆ ಸಿಗುತ್ತಿಲ್ಲ,ಗಿರೀಶ್ ಕೆ. ನಮಗೆ ದೊಡ್ಡ ಮೋಸ ಮಾಡಿದ್ದಾರೆ ಎಂದು ಮಳಿಗೆ ಮಾಲೀಕರು ಆರೋಪಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಮಳಿಗೆಗಳ ಮಾಲೀಕರಾಗಿರುವ ಸನಾವುಲ್ಲ ಖಾನ್, ಸಿದ್ಧಿಕರ್, ಮಾಲೀಕರಾದ ಟಿ.ಬಿ.ಆರ್.ಬೋರಣ್ಣ ಎಂಬುವವರಿಂದ ಮಾಲ್ ನ ಮಳಿಗೆಗಳನ್ನು ಗಿರೀಶ್ ಕೆ.ನಾಶಿ ಅವರು 29ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಬೇರೆಯ ವಿವಿಧ ಮಾಲೀಕರಿಗೆ ಬಾಡಿಗೆ ಹಾಗೂ ಲೀಸ್ ಆಧಾರದ ಮೇಲೆ ನೀಡಿ ಮಳಿಗೆಗಳ ಮಾಲೀಕರಿಂದ ತೆರಿಗೆ,ಪೇಪರ್ ಅಡ್ವಾನ್ಸ್ಡ್, ಬ್ಯಾಂಕ್ ಸಾಲ ಮರುಪಾವತಿ,ಲೀಸ್ ಬಾಡಿಗೆ ಸೇರಿದಂತೆ ಬಾರೀ ಪ್ರಮಾಣದ ಹಣವನ್ನು ಮಳಿಗೆ ಮಾಲೀಕರಿಂದ ಪಡೆದಿದ್ದರು,ಇದಲ್ಲದೇ ಬ್ಯಾಂಕ್ ಕಟ್ಟಡ ನವೀಕರಣ ನಿರ್ಮಾಣಕ್ಕೆಂದು ಆರು ಕೋಟಿ ರೂಪಾಯಿ ಸಾಲವನ್ನು ಮಾಡಿ ಅದರ ಇಎಮ್ ಐ ಹಣ ಕಟ್ಟದೇ ಮಳಿಗೆಗಳ ಮಾಲೀಕರು ಬ್ಯಾಂಕ್ ನವರಿಂದ ದಿನನಿತ್ಯ ಕಿರುಕುಳ ಅನುಭವಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಸುಮಾರು 113ಮಳಿಗೆಗಳ ಮಾಲೀಕರು ವಿವಿಧ ಉದ್ಯಮಗಳ ಶಾಪ್ ಗಳನ್ನು ತೆರೆದಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಉದ್ಯಮ ಆರಂಭಿಸಿದ್ದಾರೆ ಆದರೆ ಗಿರೀಶ್ .ಕೆ.ನಾಶಿಯವರ ತಪ್ಪಿನಿಂದ ಏಕಾಏಕಿ ಮಾಲ್ ಬಂದ್ ಮಾಡಿದ್ದರಿಂದ ಬೀದಿ ಬೀಳುವಂತಾಗಿದೆ,ಈ ಕುರಿತು ಗಿರೀಶ್ .ಕೆ.ನಾಶಿಯವರನ್ನು ಬೇಟಿ ಮಾಡಲು ಪ್ರಯತ್ನಿಸಿದರೆ ಅವರು ಸಿಗುತ್ತಿಲ್ಲ ಎಂದು ಹೇಳಿದರು.

ಪ್ಯಾಲೇಸ್ ಮಾಲ್ ನ ಉಪ ಮಾಲೀಕರಾಗಿರುವ ಗಿರೀಶ್ ಕೆ.ನಾಶಿಯವರು ಸರಿಯಾದ ರೀತಿ ಶೌಚಾಲಯ ನಿರ್ಮಾಣ ಮಾಡಿಲ್ಲ, ಕುಡಿಯುವ ನೀರಿನ ವ್ಯವಸ್ಥೆ,ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ, ನಿಯಮ ಮೀರಿ ಮಾಲ್ ನ ಪ್ಯಾಸೆಂಜ್ ನಲ್ಲಿ ಅಂಗಡಿ ನಿರ್ಮಾಣ ಮಾಡಿ ಐದು ಲಕ್ಷ ಬಾಡಿಗೆ ಪಡೆಯುತ್ತಿದ್ದರು ಎಂದು ಆರೋಪಿಸಿದರು.