ಬೆಂಗಳೂರು, ಫೆಬ್ರವರಿ 4, 2025:
ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕವಾಗಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಿದ ಕುರಿತು ನಡೆದ ಬೆಳವಣಿಗೆಗಳ ಅವಲೋಕನ
ಕರ್ನಾಟಕ ರಾಜ್ಯವು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅತ್ಯುತ್ತಮ ಹವಾಗುಣ, ಭೂಗುಣ ಮತ್ತು ಅನುಭವಿ ರೈತರನ್ನು ಹೊಂದಿದ್ದು, ಭಾರತದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. (26.21 ಲಕ್ಷ ಹೆ.) ಮತ್ತು ತೋಟಗಾರಿಕಾ ಉತ್ಪಾದನೆಯಲ್ಲಿ ದೇಶದಲ್ಲಿ ಎಂಟನೇ ಸ್ಥಾನದಲ್ಲಿದೆ. ಹಾಗೂ ಕೆಲವೊಂದು ತೋಟಗಾರಿಕೆ ಬೆಳೆಗಳಲ್ಲಿ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಹೀಗಾಗಿ ತೋಟಗಾರಿಕೆಯಲ್ಲಿ ರಾಜ್ಯವು ವಿಶಿಷ್ಟ ಸ್ಥಾನ ಪಡೆದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಾವು, ತೆಂಗು. ದ್ರಾಕ್ಷಿ. ಅಡಿಕೆ, ಬಾಳೆ, ಮೆಣಸು, ಯಾಲಕ್ಕಿ, ಕಾಫಿ, ಕೊಕೊ, ದಾಳಿಂಬೆ, ಲಿಂಬೆ, ಈರುಳ್ಳಿ, ಹೂವು, ಸೀಬೆ ಹಲವಾರು ತರಕಾರಿ, ಔಷಧೀಯ ಸಸ್ಯಗಳು ಇತ್ಯಾದಿ ಹತ್ತು ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆದು ದೇಶದಲ್ಲಿಯೇ ಮಾದರಿ ತೋಟಗಾರಿಕಾ ಕ್ಷೇತ್ರವಾಗಿ ಹೊರಹೊಮ್ಮಿರುವುದು ಎಲ್ಲರಿಗೂ ತಿಳಿದ ವಿಚಾರ. ದೇಶದಲ್ಲಿ ತೋಟಗಾರಿಕೆಗೆಂದೇ ವಿಶೇಷ ಇಲಾಖೆಯನ್ನು ಪ್ರಾರಂಭಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮೊದಲನೆಯದಾಗಿದೆ.
1. ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆ ಉದ್ಯಮದ ಮಹತ್ವ ಹಾಗೂ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ, ತೋಟಗಾರಿಕೆ ಕ್ಷೇತ್ರವು ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ, ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರವು 2008ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳನ್ನೊಳಗೊಂಡಂತೆ ಬಾಗಲಕೋಟೆಯಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು.