ಬೆಂಗಳೂರು, ಡಿಸೆಂಬರ್ 11, 2024: 

ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ (ಜಿವೈಎಸ್) ಆಯೋಜನೆಗೆ ಬೆಂಗಳೂರು ಸಜ್ಜಾಗಿದೆ. ಯೋಗ ಮತ್ತು ಸ್ವಯಂ ಆರೈಕೆಯ ಮೂಲಕ ಪರಿಪೂರ್ಣ ಬದುಕಿನ ಆಶಯದೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಪಸರಿಸುವ ನಿಟ್ಟಿನಲ್ಲಿ ಈ ಶೃಂಗ ಆಯೋಜನೆಗೊಂಡಿದೆ. ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3192 & 3191 ಸಂಸ್ಥೆಗಳು ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಪರಿಪೂರ್ಣ ಆರೋಗ್ಯ ಟ್ರಸ್ಟ್ ಹಾಗೂ ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ (ಮಯಾಮಿ, ಫ್ಲೋರಿಡಾ) ಸಹಯೋಗದಲ್ಲಿ ಶೃಂಗವನ್ನು ಹಮ್ಮಿಕೊಂಡಿವೆ. ಎರಡು ದಿನಗಳ ಈ ಪ್ರತಿಷ್ಠಿತ ಯೋಗ ಸಮ್ಮೇಳನವು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ ನಲ್ಲಿರುವ ಇಂಟ‌ರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ 2024ರ ಡಿಸೆಂಬರ್ 14 ಮತ್ತು 15ರಂದು ನಡೆಯಲಿದೆ. ಸಂಪ್ರದಾಯ ಮತ್ತು ನಾವೀನ್ಯತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸಹಯೋಗ ನೀಡಿದೆ.

ಎರಡು ದಿನಗಳ ಶೃಂಗದಲ್ಲಿ ಜಗತ್ತಿನ 50ಕ್ಕೂ ಅಧಿಕ ದೇಶಗಳಿಂದ 5000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಶಿಕ್ಷಣ ತಜ್ಞರು, ಯೋಗ ಗುರುಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈದ್ಯರು, ವೇದ ಪಂಡಿತರು ಮತ್ತು ಯೋಗ ಕುತೂಹಲಿಗಳು ಸೇರಿದ್ದಾರೆ. ಈ ವರ್ಷದ ಯೋಗ ಶೃಂಗದ ಥೀಮ್ "Yoga for Self-Care and Social Harmony (Empowering Life) ( ដ ជាជ (ಬದುಕಿನ ಸಬಲೀಕರಣ) ಎಂಬುದಾಗಿದೆ. ಯೋಗದ ಮೂಲಕ ಮಾನಸಿಕ ಆರೋಗ್ಯ, ಸಾಮುದಾಯಿಕ ಸ್ವಾಸ್ಥ್ಯ ಹಾಗೂ ಸ್ವಯಂ ಸಬಲೀಕರಣದ ಆಶಯ ಇದರ ಹಿಂದಿದೆ.

ಡಿಸೆಂಬರ್ 14ರಂದು ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲರಾಗಿರುವ ಘನತೆವೆತ್ತ ಶ್ರೀ ಸಿ.ಎಚ್.ವಿಜಯಶಂಕರ್ ಅವರು ಭಾಗವಹಿಸಲಿದ್ದಾರೆ. ಯಲಹಂಕದ ಶಾಸಕ ಶ್ರೀ ಎಸ್.ಆರ್.ವಿಶ್ವನಾಥ್, ಆರ್‌ಬಿಜಿವೈ ಚಾರ್ಟರ್ ಪ್ರೆಸಿಡೆಂಟ್ ಮತ್ತು ಜಿವೈಎಸ್ 2024 ಅಧ್ಯಕ್ಷರಾದ ರೊಟೇರಿಯನ್ ಡಾ.ಯೋಗಿ ದೇವರಾಜ್ ಗುರೂಜಿ ಉಪಸ್ಥಿತರಿರಲಿದ್ದಾರೆ.