ಆಗಸ್ಟ್ 02, 2024

ಬೆಂಗಳೂರು: ಸಂರಿದ್ಧಿ ಫೌಂಡೇಶನ್ (SAMRIDHI FOUNDATION) ಪ್ರೈವೇಟ್ ಲಿಮಿಟೆಡ್ ಕಂಪನಿಯು ದೇಶದಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಮಾಯಕ ಗ್ರಾಹಕರಿಂದ 1000 ರೂಪಾಯಿ ಹಣ ಪಡೆದುಕೊಂಡು 3 ತಿಂಗಳಲ್ಲಿ 4 ಸಾವಿರ ರೂಪಾಯಿ ನೀಡುವುದಾಗಿ ಹೇಳಿ ಚೈನ್ ಲಿಂಕ್ ಮುಖಾಂತರ ಜನರನ್ನು ಸೇರಿಸಿಕೊಂಡು ಲಕ್ಷಾಂತರ ಜನರಿಗೆ ಟೋಪಿ ಹಾಕಿದೆ. 

ಗ್ರಾಹಕರು ನೀಡುವ 1 ಸಾವಿರ ಹಣವನ್ನು ಷೇರುಮಾರುಕಟ್ಟೆ, ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಹಣವನ್ನು ನಿರಂತರವಾಗಿ 100 ದಿನಗಳ ಕಾಲ 40 ರೂಪಾಯಿಯಂತೆ 4 ಸಾವಿರ ರೂ. ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಬರುತ್ತದೆ ಎಂದು ನಂಬಿಸಿ ವಂಚಿಸಿದೆ.

ಇನ್ನು ಆಂಧ್ರ ಮೂಲದ ಜಗದೀಶ್ ರೆಡ್ಡಿ ಎಂಬುವರು ಝೂಮ್ ಆಪ್ ನಲ್ಲಿ ಕೋಲಾರ - ಚಿಕ್ಕಬಳ್ಳಾಪುರ - ಬೆಂಗಳೂರು ಗ್ರಾಹಕರನ್ನು ಸಂಪರ್ಕಿಸಿ, ಸಂರಿದ್ಧಿ ಫೌಂಡೇಶನ್ (SAMRIDHI FOUNDATION) ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಹೂಡಿದರೆ ದುಪ್ಪಟ್ಟಾಗುತ್ತದೆ ಎಂಬ ಭರವಸೆ ನೀಡಿ ವಿಡಿಯೋ ಕಾಲ್ ಮುಖಾಂತರ ಗ್ರಾಹಕರನ್ನು ಪ್ರೇರೇಪಣೆ ಮಾಡುತ್ತಿದ್ದರು. ಪ್ರತಿ ದಿನವೂ ಝೂಮ್ ಅಪ್ಲಿಕೇಶನ್ ನ ಮೀಟಿಂಗ್ ನಲ್ಲಿ ಚರ್ಚೆ ಮಾಡುತ್ತಿದ್ದ ಜಗದೀಶ್ ರೆಡ್ಡಿ ಅವರು ಗ್ರಾಹಕರಿಗೆ ದುಪ್ಪಟ್ಟು ಹಣ ಬರುವುದಾಗಿ ನಂಬಿಸಿ ಕಂಪನಿಗೆ ಹಣ ಕಟ್ಟಿಸುತ್ತಿದ್ದರು. ಇವರ ಬಣ್ಣದ ಮಾತಿಗೆ ಮರುಳಾಗಿ ಸಾವಿರಾರು ಜನರು ಹಣ ಕಳೆದುಕೊಂಡಿದ್ದಾರೆ. 

ಸಂರಿದ್ಧಿ ಫೌಂಡೇಶನ್ (SAMRIDHI FOUNDATION) ಪ್ರೈವೇಟ್ ಲಿಮಿಟೆಡ್ ನ ಗೂಗಲ್ ಅಪ್ಲಿಕೇಶನ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸಮೃದ್ಧಿ ಫೌಂಡೇಶನ್ ನಲ್ಲಿ ಹಣ ಕಟ್ಟಿದ ರಾಜ್ಯದ ಸಾವಿರಾರು ಮಂದಿ ಪರಿತಪಿಸುವಂತಾಗಿದೆ. ಕಂಪನಿಯ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಝೂಮ್ ಮೀಟಿಂಗ್ ಮಾಡುತ್ತಿದ್ದ ಜಗದೀಶ್ ರೆಡ್ಡಿ ಎಂಬುವವರು ಸಹ ಗ್ರಾಹಕರ ಫೋನ್ ಗಳನ್ನು ಸ್ವೀಕರಿಸುತ್ತಿಲ್ಲ. ಅಲ್ಲದೆ ಹಣ ಕಟ್ಟಿದರೆ ಕೆಲವೇ ದಿನಗಳಲ್ಲಿ ಮೂರು ಪಟ್ಟು ಬರುತ್ತದೆ ಎಂದು ಹೇಳಿ ಚೈನ್ ಲಿಂಕ್ ಮುಖಾಂತರ ಅಮಾಯಕ ಜನರ ಬಳಿ ಹಣ ಕಟ್ಟಿಸಿಕೊಂಡು ನಂತರ ಕಂಪನಿ ಮುಚ್ಚಿಹೋಗಿದೆ ಅಂತ ಹೇಳಿ ವಂಚಿಸುವ ದೊಡ್ಡ ಜಾಲವೇ ಇದೆ. ಹಾಗಾಗಿ ಇಂತಹ ಚಿಟ್ ಫಂಡ್ ಮೋಸದ ಜಾಲದ ಕಂಪನಿಗಳ ವಿರುದ್ಧ ರಾಜ್ಯದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂರಿದ್ಧಿ ಫೌಂಡೇಶನ್ (SAMRIDHI FOUNDATION) ನಲ್ಲಿ ಹಣ ಹೊಡಿದ ಹೆಸರು ಹೇಳಲು ಇಚ್ಚಿಸದ ಹಲವು ಗ್ರಾಹಕರು ಒತ್ತಾಯಿಸಿದ್ದಾರೆ.