ಬೆಂಗಳೂರು ಡಿಸೆಂಬರ್‌ 3, 2023: ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿರುದ್ಧ 'ಎಕ್ಸ್' ಖಾತೆಯಲ್ಲಿ ದುರುದ್ದೇಶ ಪೂರಿತ ಪೋಸ್ಟ್‌ ಮಾಡಿದ್ದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಾರ್ಟಿಯ ಐಟಿ ಸೆಲ್‌ ಉದ್ಯೋಗಿಯನ್ನು ಶಿವಾಜಿನಗರ ಪೊಲೀಸ್ ಠಾಣೆಯ ಸೈಬರ್, ಆರ್ಥಿಕ ಅಪರಾಧಗಳು ಮತ್ತು ನಾರ್ಕೋಟಿಕ್ಸ್ ವಿಭಾಗದ ಪೊಲೀಸರು  ಬಂಧಿಸಿದ್ದಾರೆ.
  
ಪ್ರಕರಣ ಸಂಬಂಧ ಬಿಆರ್‌ಎಸ್ ಪಕ್ಷದ ಸಕ್ರಿಯ ಕಾರ್ಯಕರ್ತ,ಪಕ್ಷದ ಐಟಿ ಸೆಲ್‌ ಉದ್ಯೋಗಿ  ಕರೀಂನಗರ ನಿವಾಸಿ ರವಿಕಾಂತಿ ಶರ್ಮಾ (33)ನನ್ನು ಶಿವಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದರು.  ಆತನ ತಂದೆ, ತಾಯಿ ಕೂಡ ಬಿಆರ್‌ಎಸ್ ಪಕ್ಷದ ಮಾಜಿ ಕಾರ್ಪೋರೇಟರ್‌ಗಳು ಎಂದು ಶಿವಾಜಿನಗರ ಪೊಲೀಸರು ತಿಳಿಸಿದ್ದಾರೆ.

 ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಕುರಿತು ಆರೋಪಿಯು ಸಾಮಾಜಿಕ ಮಾಧ್ಯಮ ವೇದಿಕೆ  'ಎಕ್ಸ್'ನಲ್ಲಿ ಇಂಧನ ಸಚಿವರ ನಕಲಿ ಆಡಿಯೊ ಕ್ಲಿಪ್  ಪ್ರಸಾರ ಮಾಡಿದ್ದ. ಈ ಬಗ್ಗೆ 'ಎಕ್ಸ್'ನ  ಕಾನೂನು ಜಾರಿ ವಿಭಾಗದಿಂದ ಮಾಹಿತಿ ಪಡೆದು ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. 'ಎಕ್ಸ್‌' ಖಾತೆಗೆ ಬಳಸಲಾದ ಮೊಬೈಲ್ ಸಂಖ್ಯೆ ರವಿಕಾಂತಿ ಶರ್ಮಾ ಅವರ ತಂದೆಯ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ.
 
@TelaguScribe ಎಂಬ 'ಎಕ್ಸ್‌' ಖಾತೆಯಲ್ಲಿ ಇಂಧನ ಸಚಿವರ ವಿರುದ್ಧ ದುರುದ್ದೇಶಪೂರಿತ ವೀಡೀಯೋ ಪೋಸ್ಟ್‌ ಮಾಡಿದ್ದವರ ವಿರುದ್ಧ ಬೆಸ್ಕಾಂ ಜನರಲ್ ಮ್ಯಾನೇಜರ್ (ಎ ಮತ್ತು ಹೆಚ್‌.ಆರ್‌) ಶಿವಾಜಿನಗರ ಸೈಬರ್ ಪೊಲೀಸ್ ಠಾಣೆಗೆ ನವೆಂಬರ್ 28ರಂದು ದೂರು ಸಲ್ಲಿಸಿದ್ದರು.

ಶಿವಾಜಿನಗರ ಸೈಬರ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಉಮೇಶ್ ಕುಮಾರ್ ಮತ್ತು ತಂಡದವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಜಾಮೀನಿನ ಮೇಲೆ  ಆರೋಪಿಯನ್ನು  ಬಿಡುಗಡೆ ಮಾಡಲಾಗಿದೆ.