ಬೆಂಗಳೂರು : ಪ್ರತಿಯೊಬ್ಬ ವಿದ್ಯಾರ್ಥಿಯೂ ತಲಾ ಒಂದೊಂದು ಸಸಿ ನೆಟ್ಟು, ಅದನ್ನು ದತ್ತು ಸ್ವೀಕರಿಸಿ ನೀರೆರೆದು ಪೋಷಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ಬೆಂಗಳೂರು ರಾಜಾಜಿನಗರದ ಆರ್.ಪಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿಂದು ಪರಿಸರ ನಿರಂತರ ವೇದಿಕೆ ಮತ್ತು ವಾಣಿಜ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಪರಿಸರದ ಮೇಲೆ ಆಗುತ್ತರುವ ನಿರಂತರ ದಾಳಿಯಿಂದ ಹವಾಮಾನ ವೈಪರೀತ್ಯಗಳು ಆಗುತ್ತಿದ್ದು, ಇದಕ್ಕೆ ಹಸಿರು ವಲಯ ವ್ಯಾಪ್ತಿಯ ಹೆಚ್ಚಳವೇ ಪರಿಹಾರವಾಗಿದೆ. ಎಲ್ಲ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವ, ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ “ನಾನು ಈ ಭೂಮಿಯನ್ನು ರಕ್ಷಕ, ನಾನೊಂದು ಸಸಿ ನೆಟ್ಟು, ನೀರೆರೆದು ಪೋಷಿಸುತ್ತೇನೆ, ನಾನು ಏಕ ಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲ, ಬಳಸಲೂ ಬಿಡುವುದಿಲ್ಲ,’’ ಎಂಬ ಪ್ರತಿಜ್ಞಾವಿಧಿ ಬೋಧಿಸಿದ ಸಚಿವರು, ಪ್ರತಿ ವಿದ್ಯಾರ್ಥಿಯೂ ಒಂದು ಗಿಡ ನೆಟ್ಟು ಅದರ ಫೋಟೋ ತೆಗೆದು Aranya_kfd ನಲ್ಲಿ ಟ್ಯಾಗ್ ಮಾಡುವಂತೆ ತಿಳಿಸಿದರು.  

 ಈ ಭೂತಾಯಿಯನ್ನುಜೋಪಾನ ಮಾಡಿ ಮುಂದಿನ ಪೀಳಿಗೆಗೆ ನೀಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹಸಿರು ಮನೆ ಅನಿಲಗಳ ಹೆಚ್ಚಳಕ್ಕೆ ನಮ್ಮ ಐಷಾರಾಮಿ ಜೀವನಶೈಲಿಯೇ ಕಾರಣವಾಗಿದೆ. ಪ್ರಕೃತಿ, ಪರಿಸರ ರಕ್ಷಿಸುವವರನ್ನು ಪ್ರಕೃತಿಯೂ ರಕ್ಷಿಸುತ್ತದೆ. ಪ್ರತಿಯೊಬ್ಬರೂ ಹಿತಮಿತವಾಗಿ ನೈಸರ್ಗಿಕ ಸಂಪನ್ಮೂಲ ಬಳಸಬೇಕು. ಅನಗತ್ಯವಾಗಿ ಯಾವುದೇ ವಾಹನ, ವಿದ್ಯುತ್ ಉಪಕರಣ ಬಳಸಬಾರದು. ಪ್ರಕೃತಿಯ ಬಗ್ಗೆ ಕಾಳಜಿ ಇದ್ದರೆ, ನಮ್ಮ ಪರಿಸರ ಸ್ವಚ್ಛವಾಗಿದ್ದರೆ ನಾವು ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಇಂದು ಗಾಳಿಯಲ್ಲಿ ವಿಷ ಇದೆ, ಕುಡಿಯುವ ನೀರಲ್ಲಿ ವಿಷವಿದೆ, ನಾವು ತಿನ್ನುವ ಆಹಾರದಲ್ಲಿ ವಿಷ ಇದೆ. ಈ ನೀರು ವಿಷವಾಗಲು, ಗಾಳಿ ವಿಷವಾಗಲು, ಆಹಾರ ವಿಷವಾಗಲು ಮನುಷ್ಯರಾದ ನಾವೇ ಕಾರಣ. ಹೀಗಾಗಿ ಪರಿಸರ ರಕ್ಷಣೆಗೆ ನಾವೆಲ್ಲಾ ಬದ್ಧರಾಗಬೇಕು. ಪರಿಸರ ರಕ್ಷಣೆ ಒಂದು ದಿನದ ಕಾರ್ಯಕ್ರಮ ಆಗಬಾರದು. ಅದು ನಿರಂತರವಾಗಬೇಕು. ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.

ಶೇ.33ರಷ್ಟು ಹಸಿರು ಮಾಡೋಣ: ಪ್ರಸ್ತುತ ನಮ್ಮ ರಾಜ್ಯದಲ್ಲಿ ಶೇ.21ರಷ್ಟು ಹಸಿರು ವ್ಯಾಪ್ತಿಯಿದ್ದು, ಇದನ್ನು ಶೇ.33ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಸಾರ್ವಜನಿಕರು ಅದರಲ್ಲೂ ಇಂದಿನ ಯುವ ಪೀಳಿಗೆ ಕೈಜೋಡಿಸಬೇಕು ಎಂದು ಈಶ್ವರ ಖಂಡ್ರೆ ಮನವಿ ಮಾಡಿದರು.

ಈ ಕಾಲೇಜಿನಲ್ಲಿ ಪರಿಸರ ನಿರಂತರ ವೇದಿಕೆಯ ಜೊತೆಗೆ, ವಾಣಿಜ್ಯ ವೇದಿಕೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರ ಇದ್ದರೆ ಸಾಲದು ವ್ಯವಹಾರ ಜ್ಞಾನವೂ ಅಗತ್ಯ. ಉತ್ತಮ ಜೀವನ ನಡೆಸಲು ಬದುಕಲ್ಲಿ ಆರ್ಥಿಕ ಶಿಸ್ತು ಇರಬೇಕು. ವ್ಯಾವಹಾರಿಕ ಜ್ಞಾನ ಇರಬೇಕು. ಈ ವಾಣಿಜ್ಯ ವೇದಿಕೆ ನಿಮಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸಲಿ ಎಂದರು.

ಕಾರ್ಯಕ್ರಮದಲ್ಲಿ ಆರ್.ಪಿ.ಇ.ಎಸ್. ಅಧ್ಯಕ್ಷ ಡಾ. ಜಿ.ಬಿ. ಪರಮಶಿವಯ್ಯ, ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಎಂ.ಎಸ್. ಮೃತ್ಯುಂಜಯ ಮತ್ತಿತರರು ಪಾಲ್ಗೊಂಡಿದ್ದರು.