ಬೆಂಗಳೂರು : ನಗರದ ಮಡಿವಾಳ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಂಗಡಣೆಯ ಪ್ರಕ್ರಿಯೆಯನ್ನು ಪರಿಶೀಲಿಸಿ, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು *ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು* ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಮಡಿವಾಳ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಳಿಗೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಡಿವಾಳ ಮಾರುಕಟ್ಟೆಯು ಸುಮಾರು 1 ಕಿ.ಮೀ ಪ್ರದೇಶದಲ್ಲಿದ್ದು, 405 ಮಳಿಗೆಗಳಿವೆ. ಮಡಿವಾಳ ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಸರಿಯಾದ ಅನುಕ್ರಮದಲ್ಲಿ ವಿಂಗಡಿಸುವ ಉದ್ದೇಶದಿಂದ ಎನ್.ಜಿ.ಒ ಸಂಸ್ಥೆಗಳಾದ ವೇದನ್ ಟ್ರಸ್ಟ್ ಹಾಗೂ ಎಸ್.ವಿ.ಪಿ ಇಂಡಿಯಾ ಸಂಸ್ಥೆಗಳು ಕಳೆದ 2018 ರಿಂದ ಮಾರಾಟಗಾರರು ಮತ್ತು ಗ್ರಾಹಕರಿಗೆ ತ್ಯಾಜ್ಯ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಾ ಮಳಿಗಗಳಲ್ಲಿ ತ್ಯಾಜ್ಯ ಬೇರ್ಪಡಿಸಿ ನೀಡಲು ಟ್ರೇ ವ್ಯವಸ್ಥೆ ಮಾಡಲಾಗಿದೆ. 

ಅದರಂತೆ, ಇದೀಗ ಸರಿಯಾದ ಅನುಕ್ರಮದಲ್ಲಿ ತ್ಯಾಜ್ಯ ವಿಂಗಡಣೆ ಮಾಡಲಾಗುತ್ತಿದ್ದು, ಇದೀಗ ಪ್ರತಿನಿತ್ಯ 10 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 5 ರಿಂದ 6 ಟನ್ ಹಸಿ ತ್ಯಾಜ್ಯವನ್ನು ಹಸುಗಳನ್ನು ಸಾಕಿರುವಂತಹವರು ಹಾಗೂ ಬಯೋಗ್ಯಾಸ್ ಮಾಡುವವರು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನುಳಿದ 4 ಟನ್ ಹಸಿ ತ್ಯಾಜ್ಯವನ್ನು ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಸಾಕಷ್ಟು ಕಡಿಮೆಯಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಿ ಅದನ್ನು ಪರಿನಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮಡಿವಾಳ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವ ಜೊತೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ, ಗ್ರಾಹಕರ ಓಡಾಟಕ್ಕೆ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡು ಅದನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 

ಒಣ ತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪಿಸಿ:

ಮಡಿವಾಳ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡುವ ಉದ್ದೇಶದಿಂದ ಒಣ ತ್ಯಾಜ್ಯ ಸಂಗ್ರಹಣಾ ಘಕಟವನ್ನು ಸ್ಥಾಪಿಸಿ, ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಸ್ಥಳೀಯ ಮಟ್ಟದಲ್ಲೇ ವಿಲೇವಾರಿ ಮಾಡಬೇಕು. ಪಾಲಿಕೆಯ ನಿಯಮಗಳನ್ನು ಪಾಲಿಸದೇ ಇರುವಂತಹವರಿಗೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ವೇಳೆ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿ, ಕಂದಾಯ ಅಧಿಕಾರಿಗಳು, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಮಾರ್ಷಲ್ ಗಳು ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.