ಬೆಂಗಳೂರು : ಜೈನಮುನಿಗಳ ಕೊಲೆ ಪ್ರಕರಣ,ಕ್ಷುಲ್ಲಕ ಕಾರಣಕ್ಕೆ ಸಂಭವಿಸಿದ ಟಿ.ನರಸಿಪುರ ಕೊಲೆ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು;ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು.ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

ವಿಧಾನಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ,ಬಸವನಗೌಡ ಪಾಟೀಲ್‌,ಆರ್‌.ಅಶೋಕ,ಅರಗ ಜ್ಞಾನೇಂದ್ರ,ವಿ.ಸುನೀಲಕುಮಾರ ಅವರ ನಿಯಮ 60ರ ಸೂಚನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದರು.

ಜೈನಮುನಿಗಳ ಕೊಲೆ ಅತ್ಯಂತ ಅಮಾನುಷವಾದುದು;ಯಾರು ಕೊಲೆ ಮಾಡಿದರೂ ಶಿಕ್ಷೆ ಆಗಲೇಬೇಕು.ಪೊಲೀಸರು ದೂರು ಬಂದ 6 ಗಂಟೆಗೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ನಿರಂತರ 7 ಗಂಟೆಗಳ ಕಾಲ ಕೊಳವೆಬಾವಿಯಿಂದ ಪ್ರಯತ್ನಿಸಿ ಮೃತದೇಹವನ್ನು ತೆಗೆದಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದ್ದು, ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ; ಒತ್ತಡ ಮತ್ತು ಪ್ರಭಾವಗಳಿಗೆ ಮಣಿಯದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕೆಲಸ ಮಾಡಲಾಗುವುದು ಎಂದರು.

ಜೈನಮುನಿಗಳ ಕೊಲೆ ಪ್ರಕರಣ ಸಿಬಿಐ ತನಿಖೆ ಅಗತ್ಯವಿಲ್ಲ;ಕರ್ನಾಟಕ ಪೊಲೀಸರ ಕೈಯಿಂದಲೇ ತನಿಖೆ ಮಾಡಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು.ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಟಿ.ನರಸಿಪುರ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವಿದ್ದರೇ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಎಲ್ಲ ಪ್ರಕರಣಗಳನ್ನು ನಮ್ಮ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಜೈನಮುನಿಗಳ ಆಶ್ರಮ ಹಾಗೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಾಸ್ತವ ವರದಿಯನ್ನು ಸದನದ ಮುಂದಿಟ್ಟರು ಮತ್ತು ಈ ವಿಷಯದಲ್ಲಿ ನಮ್ಮ ಪೊಲೀಸರು ಎಲ್ಲ ಆಯಾಮಗಳಿಂದಲೂ ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು,ಸಿಬಿಐ ತನಿಖೆ ಅಗತ್ಯವಿಲ್ಲ ಎಂದರು.