ಬೆಂಗಳೂರು : ರಾಜ್ಯದಲ್ಲಿ ವಿವಿಧೆಡೆ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವ ನಿಟ್ಟಿನಲ್ಲಿ "ಒಂದು ಜಿಲ್ಲೆ ಒಂದು ಕ್ರೀಡೆ" ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದ್ದು,ಶೀಘ್ರ ಜಾರಿಗೊಳಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ,ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಒಂದೊಂದು ಪ್ರದೇಶದಲ್ಲಿ ಒಂದೊಂದು ಕ್ರೀಡೆಗಳು ಹೆಸರುವಾಸಿ. ವಿಜಯನಗರದಲ್ಲಿ ಕುಸ್ತಿ,ವಿಜಯಪುರದಲ್ಲಿ ಸೈಕ್ಲಿಂಗ್ ನಂತೆ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಕ್ರೀಡೆಗಳು ಹೆಸರುವಾಸಿಯಾಗಿದ್ದು, ಆ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿಮಟ್ಟದಿಂದ ಜಿಲ್ಲಾಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ಧಗೊಳಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 5ಸಾವಿರ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಸಿಎಂ ಅವರು ಒದಗಿಸಿದ್ದು, ಸದರಿ ಅನುದಾನದ ಸದ್ಭಳಕೆ ಮಾಡಿಕೊಂಡು ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ 2013ರಿಂದ ಇಲ್ಲಿಯವರೆಗೆ ಸಾವಿರಾರು ಕೋಟಿ ರೂ.ಗಳು ಖರ್ಚು ಮಾಡಲಾಗಿದ್ದು,ಸರಕಾರದ ಪ್ರಯೋಜನ ಪಡೆದುಕೊಂಡಿರುವ ಪರಿಶಿಷ್ಟ ಪಂಗಡದ ಫಲಾನುಭವಿಗಳ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆಯೇ ಎಂಬುದರ ಕುರಿತು ಇಲಾಖೆಯಿಂದ ಮೌಲ್ಯಮಾಪನ ನಡೆಸಲಾಗುವುದು ಎಂದು ಅವರು ಹೇಳಿದರು.

*ಬಜೆಟ್ ನಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕೆ 1588.23 ಕೋಟಿ ರೂ.*: ಪರಿಶಿಷ್ಟ ಪಂಗಡದ ಸಮುದಾಯದ ಕಲ್ಯಾಣಕ್ಕಾಗಿ ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1588.23ಕೋಟಿ ರೂ.ಗಳನ್ನು ಒದಗಿಸಿದ್ದಾರೆ ಎಂದು ಸಚಿವ ನಾಗೇಂದ್ರ ಅವರು ತಿಳಿಸಿದರು.

ಈಗ ನೀಡಲಾಗಿರುವ ಬಜೆಟ್ ನಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಪರಿಶಿಷ್ಟ ಪಂಗಡಗಳ ಜನಾಂಗದಲ್ಲಿ ಸೋಲಿಗ ಸಮುದಾಯ ಒಳಗೊಂಡ ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ 50 ಕೋಟಿ ಮೀಸಲಿಡಲಾಗುತ್ತಿದೆ ಎಂದರು.

ರಾಜ್ಯದ 8 ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ 11 ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು 6 ತಿಂಗಳ ಬದಲು 12 ತಿಂಗಳಿಗೆ ವಿಸ್ತರಿಸಿ 50 ಕೋಟಿ ರೂ.ಗಳ ಮೀಸಲಿಡಲಾಗುತ್ತಿದೆ ಎಂದರು.

ಅರಣ್ಯ ಉತ್ಪನ್ನಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ, ಬುಡಕಟ್ಟು ಪ್ರದೇಶಗಳಲ್ಲಿ 100 ಅರಣ್ಯ ಉತ್ಪನ್ನ ಘಟಕಗಳನ್ನು TRIFED ಸಮನ್ವಯದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

Scsp & TSP ಯೋಜನೆಗೆ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ 9960 ಕೋಟಿ ಮೀಸಲು.

Scsp/Tsp ಅಧಿನಿಯಮ 13ರಡಿ ಹಂಚಿಕೆಯಾಗುವ ಅನುದಾನವನ್ನು ಆಯಾ ಸಮುದಾಯಗಳ ಒಳಿತಿಗೆ ಬಳಕೆಯಾಗಬೇಕು ಎಂದು ವಿಶೇಷ ಆದ್ಯತೆ ನೀಡಿ ಮುಖ್ಯಮಂತ್ರಿಗಳು ಸೆಕ್ಷನ್ 7ಡಿ ಅನ್ನು ಕೈಬಿಟ್ಟಿದ್ದಾರೆ ಎಂದು ಅವರು ವಿವರಿಸಿದರು.

ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಸೇರಿದ 10 ಕ್ರೈಸ್ ವಸತಿ ಶಾಲೆ ಕ್ರೀಡಾ ಪ್ರೋತ್ಸಾಹಕ್ಕೆ ತಲಾ 2ಕೋಟಿಯಂತೆ 20 ಕೋಟಿ ಮೀಸಲಿಡಲಾಗುತ್ತಿದೆ ಎಂದರು.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ವಿಶ್ವದಲ್ಲಿ 250 ರೊಳಗೆ ಯೂನಿವರ್ಸಿಟಿ ರಾಂಕಿಂಗ್ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ & ಸ್ನಾತಕೋತ್ತರ ಉನ್ನತ ಶಿಕ್ಷಣವನ್ನು ವಿದೇಶ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಈ ಯೋಜನೆ ಅನುಷ್ಠಾನಕ್ಕೆ 36 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ISEC ಸಂಸ್ಥೆಯಲ್ಲಿ ಪಿ.ಹೆಚ್.ಡಿ ಮಾಡುವ ಎಸ್‌.ಸಿ & ಎಸ್.ಟಿ ವಿದ್ಯಾರ್ಥಿಗಳಿಗೆ ಡಾ. ಬಿ. ಆರ್ ಅಂಬೇಡ್ಕರ್ ಫೆಲೋಶಿಪ್ ನೀಡಲು 2 ಕೋಟಿ ಕಾರ್ಪೊಸ್ ಫಂಡ್ ನೀಡಲಾಗುತ್ತಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರ ಖರೀದಿ ಸಹಾಯ ಧನ ಶೇ.75 ರಷ್ಟು 4 ಲಕ್ಷ

ರೂಪಾಯಿ ಸಹಾಯ ಧನ ನೀಡಲಾಗುತ್ತದೆ ಎಂದರು. 

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ 2ಕೋಟಿ ಸರ್ಕಾರದಿಂದ ಸಮನಾಂತರ ಖಾತ್ರಿ ಯೋಜನೆ ಇದೀಗ ಇದ್ದು, ಸಮಾನಾಂತರ ಖಾತ್ರಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೂ ವಿಸ್ತರಣೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಯುವಜನರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೊಂದಿಗೆ ಉದ್ಯಮಶೀಲತೆ ಅಭಿವೃದ್ಧಿ, ಕಾರ್ಯಕ್ರಮದಡಿ EDP ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ಎಸ್.ಸಿ & ಎಸ್.ಟಿ ಒಂದು ಲಕ್ಷ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಉತ್ಪನ್ನ ಚಟುವಟಿಕ ಕೈಗೊಳ್ಳಲು ಬ್ಯಾಂಕ್ ಸಾಲಕ್ಕೆ ಗರಿಷ್ಟ ಶೇ 20 ರಷ್ಟು ಸಹಾಯಧನ. ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ & ಪರಶಿಷ್ಟ ಪಂಗಡದ ಹಿರಿಯ ನಾಗರಿಕರ ಆರೈಕೆ & ನೆರವಿಗೆ ವೃದ್ಧಾಶ್ರಮ ಮಾಡಲು CRC & NGO ಸಹಭಾಗಿತ್ವ ಸ್ಥಾಪನೆ ಮಾಡಲಾಗುವುದು ಎಂದರು.

*ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 236 ಕೋಟಿ ರೂ:*

ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 236 ಕೋಟಿ ರೂ.ಗಳು ನೀಡಿದ್ದಾರೆ ಎಂದು ಸಚಿವ ನಾಗೇಂದ್ರ ಅವರು ತಿಳಿಸಿದರು.

ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ವಿಜೇತರಿಗೆ ಗ್ರೂಪ್- A ಹುದ್ದೆ ಮತ್ತು ಏಷಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೆ ಗ್ರೂಪ್ -B ಹುದ್ದೆ ನೀಡಲು ಪ್ರಸಕ್ತ ಸಾಲಿನಿಂದ ಚಾಲನೆ ನೀಡಲಾಗುವುದು ಎಂದರು.

ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ.3ರಷ್ಟು ಹುದ್ದೆಗಳನ್ನು ಮೀಸಲೀಡಲಾಗುವುದು.ಈಜು ಕ್ರೀಡಾಪಟುಗಳು ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಯಶಸ್ವಿಯಾಗಲು ತರಬೇತಿ ನೀಡಲು ಪ್ರತಿ ವರ್ಷಕ್ಕೆ 2 ಕೋಟಿ ಮೀಸಲು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವ ಸಾಮರ್ಥ್ಯವುಳ್ಳ ರಾಜ್ಯದ ಕ್ರೀಡಾಪಟುಗಳನ್ನು ತಯಾರಿಸಲು ಬೆಂಗಳೂರಿನಲ್ಲಿ ಬಾಸ್ಕೆಟ್ ಬಾಲ್ ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು ಮೈಸೂರಿನಲ್ಲಿ ಸೈಕಲಿಂಗ್ ವೇಲೋಡ್ರೋಮೋಗಾಗಿ ತಲಾ 10 ಕೋಟಿ ಮೀಸಲಿಡಲಾಗಿದೆ ಎಂದರು.

ಕ್ರೀಡಾ ಚಟುವಟಿಕೆಯಲ್ಲಿ ವಿಶೇಷ ಚೇತನರು ಮತ್ತು ಮಹಿಳೆಯರು ಭಾಗವಹಿಸಲು ಅಗತ್ಯ ಸೌಕರ್ಯ ಹಾಗೂ ತರಬೇತಿದಾರರ ಸೇವೆ ಒದಗಿಸಲು 10 ಕೋಟಿ ಅನುದಾನ. ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯ ಸ್ಥಾಪಿಸಲು 5 ಕೋಟಿ ಅನುದಾನ. ಕ್ರೀಡಾಪಟುಗಳು ತಂಗಲು ಸುಸಜ್ಜಿತ ಕ್ರೀಡಾ ವಸತಿ ನಿಲಯವನ್ನು ನಿರ್ಮಿಸಲು 10 ಕೋಟಿ ರೂಪಾಯಿ ಅನುದಾನ ಒದಗಿಸಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.