ಬೆಂಗಳೂರು :ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ವಸತಿ ಯೋಜನೆಗಳಡಿ 4.42ಲಕ್ಷ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಂಡರೂ, ಮುಖ್ಯಮಂತ್ರಿಗಳ ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಯಲ್ಲಿ 26,582 ಮನೆ ಹಂಚಿಕೆ ಮಾಡಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಚುಕ್ಕೆ ಗುರುತಿಲ್ಲದ ಪ್ರೆಶ್ನೆಗೆ ಉತ್ತರಿಸಿರುವ ಸಚಿವರು, ಸರ್ಕಾರ ನಡೆಸಿರುವ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶ ದಲ್ಲಿ 18.72 ಲಕ್ಷ ವಸತಿ ರಹಿತರು, 7.19 ಲಕ್ಷ ನಿವೇಶನ ರಹಿತರಿದ್ದಾರೆ. ಅದೇ ರೀತಿ ನಗರ ಪ್ರದೇಶದಲ್ಲಿ 3.02 ಲಕ್ಷ ವಸತಿ ರಹಿತರು, 10.27 ಲಕ್ಷ ನಿವೇಶನ ರಹಿತರು ಇದ್ದಾರೆ ಎಂದು ಹೇಳಿದರು.

ಕಳೆದ ಮೂರು ವರ್ಷ ಗಳಲ್ಲಿ ಪ್ರಧಾನಮಂತ್ರಿ ಅವಾಸ್ ಗ್ರಾಮೀಣ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 214.92 ಕೋಟಿ ರೂ., ನಗರ ಯೋಜನೆಯಡಿ 1470.22 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.