ಬೆಂಗಳೂರು: ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್..

ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ, ಹಿಂದಿನ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್. ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್ ಹಾಗೂ ಅನೇಕ ಎಟಿಎಮ್ ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್…

ರಾಜ್ಯ ಮುಂಗಡ ಪತ್ರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ವ್ಯಕ್ತಪಡಿಸಿದ ಅಭಿಪ್ರಾಯವಿದು.

ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಅವರು ಕಟುವಾಗಿ ಟೀಕಿಸಿದರು.

ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು. ಕೇಂದ್ರ ಸರ್ಕಾರ ಮತ್ತು ಹಿಂದಿನ ಸರಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನ ಉಲ್ಲಂಘಿಸಿದ್ದಾರೆ, ಸ್ವೆಚ್ಚಾಚಾರದಿಂದ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಹೇಳುವ ಬದಲು ಕೇವಲ ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಬಹಳಷ್ಟು ಕಡೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ಯೋಜನೆಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಈಗ 40 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಸೇರ್ಪಡೆ ಆಗಿದೆ. 1 ಲಕ್ಷ 75 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಹಣ ಇಡದೆ ಘೋಷಿಸಿದ್ದಾರೆ. 2013 -18 ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ದಾರೆ. ಎಲ್ಲಿ ಕಟ್ಟಿದ್ದಾರೆ, ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಅದನ್ನು ಎಲ್ಲಿಂದ ತರುತ್ತಾರೆ. ಈಗ ನೋಡಿದರೆ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಅಗತ್ಯ ಇತ್ತೆ ಎಂದು ಅವರು ಪ್ರಶ್ನಿಸಿದರು.

ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್ ನಲ್ಲಿ ಎರಡೂವರೆ ಲಕ್ಷ ಕೋಟಿ ರೆವಿನ್ಯೂ ಎಕ್ಸ್ ಪೆಂಡಿಚರ್, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. ಅದಾದ ಮೇಲೆ 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು? ಇವರು ನೋಡಿದರೆ ಹಿಂದಿನ ಸರಕಾರ ಆರ್ಥಿಕ ಶಿಸ್ತನ್ನ ಹಾಳು ಮಾಡಿದೆ ಬಜೆಟ್ ಉದ್ದಕ್ಕೂ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ಜನರು ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನತೆಯನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಹೊರೆ ಹೊರೆಸುತ್ತಿದ್ದಾರೆ. ಇಷ್ಟೋಂದು ಸಾಲ ಏಕೆ ಮಾಡ್ತೀದೀರಿ. ಅದಕ್ಕೆ ಕಾರಣ ಕೊಡಿ ಎಂದು ಅವರು ಒತ್ತಾಯ ಮಾಡಿದರು.