ಕನ್ನಡವು ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳ ಭಂಡಾರವಾಗಿದ್ದು, ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಅರಿವು ಮೂಡಿಸುವುದು ಭಾಷೆಯ ಶ್ರೀಮಂತಿಕೆಯನ್ನು ವೃದ್ಧಿಸುವ ಒಂದು ಭಾಗವಾಗಿದೆ ಎಂದು ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಸಿ ಷಣ್ಮುಗಂ ಅವರು ಬಣ್ಣಿಸಿದರು. 

 ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಲಾ-ಸಿರಿ ಎಂಬ ಶೀರ್ಷಿಕೆ ಅಡಿ ಸೋಮವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಎ.ಸಿ ಷಣ್ಮುಗಂ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಕನ್ನಡ ಚಲನಚಿತ್ರ ಗೀತೆಯನ್ನು ಹಾಡಿದರು. ಕನ್ನಡ ಪರಂಪರೆಯನ್ನು ಎತ್ತಿ ತೋರಿಸುವಂತಹ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು. ಕನ್ನಡ ಭಾಷೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.

ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಡಾ.ಅರುಣ್ ಕುಮಾರ್, ಟ್ರಸ್ಟಿ ಲಲಿತಾ ಲಕ್ಷ್ಮೀ, ಕಾರ್ಯನಿರ್ವಾಹ ನಿದೇರ್ಶಕ ಡಾ. ವಿಜಯಾನಂದ, ಡೀನ್ ಡಾ.ಸತ್ಯಮೂರ್ತಿ, ಸಲಹೆಗಾರರು ಡಾ.ನವೀನ್, ಪ್ರಾಂಶುಪಾಲ ಡಾ. ಬಸವರಾಜ್ ಭಂಡಾರೆ, ವೈದ್ಯಕೀಯ ಅಧೀಕ್ಷಕ ಡಾ.ಪ್ರವೀಣ್ ಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.