ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುಪ್ರೀತ್ ತಂದೆ ನಟೇಶಚಾರಿ ಎಂಬುವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಕೇರಳದ ಗೋಕುಲಮ್ ಚಿಟ್ ಅಂಡ್ ಫೈನಾನ್ಸ್ ಕಂಪನಿಯಲ್ಲಿ ನಾನು ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕಂಪನಿಯ ನೌಕರನಿಗೆ ನೀಡಬೇಕಾದ ಇಎಸ್ಐ, ಪಿಎಫ್ ಸೇರಿದಂತೆ ಯಾವುದೇ ರೀತಿಯ ಸವಲತ್ತು ನೀಡಿಲ್ಲ. ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯಿಟ್ಟು ಕಂಪನಿಗಾಗಿ ದುಡಿದರೂ 13,500 ರೂ.ನಂತೆ 5 ವರ್ಷಗಳ ಕಾಲ ವೇತನ ಕಡಿತಗೊಳಿಸಿದರು. ಆ ಹಣ ಕೇಳಿದರೆ ಕ್ಯಾರೇ ಎನ್ನುತ್ತಿಲ್ಲ. ಅರ್ಧ ಸಂಬಳದಲ್ಲಿ ಮನೆ ನಡೆಸಲು ತುಂಬಾ ಕಷ್ಟಕರವಾಯಿತು. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಕೆಲಸದ ಒತ್ತಡ. ಇದರಿಂದ ನಾನು ಮಾನಸಿಕವಾಗಿ ಖಿನ್ನತೆಗೊಳಗಾದೆ. ಈ ಸಂದರ್ಭದಲ್ಲೇ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾದೆ. ಓಪನ್ ಹಾರ್ಟ್ ಸರ್ಜರಿ ಆಗಿ 2 ತಿಂಗಳುಗಳ ಕಾಲ ಮನೆಯಲ್ಲಿದ್ದೆ. ಆಗ ಜೀವನ ನಡೆಸೋದು ತುಂಬಾ ದುಸ್ತರವಾಯಿತು. ಇಂತಹ ಸಂದಿಗ್ಧ ಸ್ಥಿತಿಯಲ್ಲಾದರೂ ಗೋಕುಲಮ್ ಕಂಪನಿಯವರು ನೆರವಿಗೆ ಬರಬೇಕಾಗಿತ್ತು. ಆದರೆ ಕಂಪನಿಯಿಂದ ಯಾವುದೇ ರೀತಿಯ ನೆರವು ಸಿಗಲಿಲ್ಲ. ಅವರ ದೃಷ್ಟಿಯಲ್ಲಿ ನೌಕರರೆಂದರೆ ಜೀತದಾಳುಗಳು ಇದ್ದಂತೆ. 13 ವರ್ಷಗಳಿಂದ ಕಂಪನಿಗಾಗಿ ದುಡಿದ ನನಗೆ ಸಂಕಷ್ಟದ ಸಮಯದಲ್ಲಾದರೂ ಸ್ಪಂದಿಸುವ ಕನಿಷ್ಟ ಪರಿಜ್ಞಾನ ಅವರಿಗಿಲ್ಲ. ಇದು ಕೇವಲ ನನ್ನ ಸಮಸ್ಯೆ ಮಾತ್ರವಲ್ಲ; ಆ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ನೌಕರರ ಸಮಸ್ಯೆಯೂ ಆಗಿದೆ. ಗೋಕುಲಮ್ ಕಂಪನಿ ವಿರುದ್ಧ ದೂರು ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ದಿನನಿತ್ಯ 10 ಜನ ಗೂಂಡಾಗಳು ನಮ್ಮನ್ನು ಹಿಂಬಾಲಿಸುತ್ತಿದ್ದು, ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿಗೆ ಬಂದಿದ್ದ ನನಗೆ ಧೈರ್ಯ ಹೇಳಿ ನನಗೆ ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಎ.ಸಿ. ಕಾಂತರಾಜು. ನ್ಯಾಯ ಸಿಗುತ್ತೆ ಎಂಬ ಭರವಸೆಯಲ್ಲಿ ನಾನಿದ್ದೇನೆ ಎಂದು ಹೇಳಿದರು.
 
  
  
  
   
   
   
  