ಈ ಕಾಂತಾರ ಚಾಪ್ಟರ್ 01 ಕಾಡಿನ ಒಂದು ಅಜ್ಞಾತ ಸ್ಥಳದಲ್ಲಿ ವಿಷ್ಣುವಿನ ಅವತಾರವಾದ ಪಂಜುರ್ಲಿ ದೈವದ ರೋಮಾಂಚನ ಸನ್ನಿವೇಶಗಳ ಜೊತೆಗೆ, ಧನಾತ್ಮಕ ಅಂಶಗಳನ್ನು ಒಳಗೊಂಡ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್ 01 (ಲೆಜೆಂಡ್) 

ಈ ಹಿಂದಿನ ಚಾಪ್ಟರ್ ನಲ್ಲಿ ನಾಯಕ ಮಾಯವಾಗುವ ಸ್ಥಳದಿಂದ ಈ ಸಿನಿಮಾದ ಕಥೆ ಪ್ರಾರಂಭವಾಗುವುದರ ಜೊತೆಗೆ ದೈವದ ಕಥೆಯೊಂದಿಗೆ ಇತಿಹಾಸದ ಪುಟಗಳು ತೆರೆಯುತ್ತವೆ, ಸಿನಿಮಾಗೆ ಬೇಕಾಗಿದ್ದ ಒಂದು ವಿಶೇಷ ಕಥೆಯ ಪರದೆಯನ್ನು ರಿಷಬ್ ಶೆಟ್ಟಿಯವರು ತನ್ನದೇ ರೀತಿಯಲ್ಲಿ ತೆರೆದಿಟ್ಟು ಪ್ರೇಕ್ಷಕರ ದೃಷ್ಟಿಯನ್ನು ಅವರ ನಿರ್ದೇಶನದ ಮುಷ್ಟಿಯಲ್ಲಿ ಹಿಡಿದಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು, 

ಏಕೆಂದರೆ ಸಿನಿಮಾ ಹಾಲ್ ನಲ್ಲಿ ಕೂರುವ ಪ್ರೇಕ್ಷಕರ ಗಮನ ಬೇರೆಲ್ಲಿವೂ ಹೋಗದೆ ಹೊಸ ಪ್ರಪಂಚದಲ್ಲಿದ್ದೇವೆ ಎಂಬ ಕನಸಿನ ಕಡೆಗೆ ಕರೆದೊಯ್ಯುವಂತೆ ಸಿನಿಮಾವನ್ನು ರಿಷಬ್ ಶೆಟ್ಟಿಯವರು ಅದ್ಬುತವಾಗಿ ನಿರ್ದೇಶನ ಮಾಡಿ ತೋರಿಸಿದ್ದಾರೆ, ಹಾಗೂ ಹಿಂದೂ ಧರ್ಮದ ಸಂಸ್ಕೃತಿಯನ್ನು ಮತ್ತು ನಮ್ಮ ಮಣ್ಣಿನಲ್ಲಿ ಬೆಳೆದೆ ಸಾಂಬಾರ್ ಪದಾರ್ಥಗಳಿದ್ದ ಮೌಲ್ಯವನ್ನು ಮೊತ್ತೊಮ್ಮೆ ವಿನೂತನ ರೀತಿಯಲ್ಲಿ ಜನರಿಗೆ ಪ್ರದರ್ಶನ ಮಾಡಿದ್ದಾರೆ.

ಈ ಕಾಂತಾರ ಚಾಪ್ಟರ್ 01 ಸಿನಿಮಾಗೆ ಬೇಕಾಗಿದ್ದ ತಿರುವುಗಳನ್ನು ಒಂದು ಅದ್ಬುತ ಶೈಲಿಯನ್ನು ನಮ್ಮ ಶೆಟ್ಟರು ತುಂಬ ವಿಭಿನ್ನವಾಗಿ ಯೋಚನೆ ಮಾಡಿ ಸಿನಿಮಾ ಕಥೆ ಕಟ್ಟುವುದರ ಜೊತೆಗೆ ಅಭಿನಯ ಮಾಡಿ ಈ ಸಿನಿಮಾದ ಕಥೆ ಯಾರೂ ಊಹಿಸಲಾರದ ಹಾಗೆ ಒಂದೊಂದು ಸನ್ನಿವೇಶಕ್ಕೂ ಮತ್ತೊಂದು ಕಥೆ ಇದರೊಳಗೆ ಅಡಗಿದೆ ಎಂಬ ಟ್ವಿಸ್ಟ್ ಮೂಲಕ ಇಂಟರ್ವಲ್ ನಲ್ಲಿ ನಿಲ್ಲಿಸುತ್ತಾರೆ, 

ಈ ಕಾಂತಾರ ಚಿತ್ರದ ಕಥೆಯನ್ನು ವಿಷ್ಣು ಅವತಾರದವಾದ ವರಾಹ ದೈವದ ಪಂಜುರ್ಲಿ ದೈವ ಮೂಲಕ ಪ್ರಾರಂಭಿಸಿ, ಕದಂಬರ ಆಳ್ವಿಕೆಯಲ್ಲಿ ಮಹಾ ಶಿವನು ಜ್ಞಾನ ಮಾಡಿದ್ದ ಎಂಬಲಾದ ಕಾಂತಾರದ ತೋಟದ ಪ್ರದೇಶಕ್ಕೆ ಕರೆದೊಯ್ದು, ಆ ಪ್ರದೇಶದಲ್ಲಿ ಅಡಗಿದ್ದ ದೈವಕಣದ ಶಕ್ತಿಯನ್ನು ಬಂಧಿಸಲು, ರಾಕ್ಷಸ ಕಣಗಳಲ್ಲಿ ಉಳಿದಿದ್ದ ಅಗೋಚರ ಶಕ್ತಿಗಳ ಜೊತೆಗೆ ಮಾನವನು ಕೈ ಜೋಡಿಸಿ, ಕಾಂತಾರ ತೋಟವನ್ನು ಆಕ್ರಮಿಸಲು, ಪರಮಶಿವನನ್ನೇ ಬಂಧಿಸಲು ದಿಗ್ಬಂಧನ ಎಂಬ ಮಾಯಾಲೋಕವನ್ನು ಸೃಷ್ಟಿಸಿ ದೈವವನ್ನು ತನ್ನ ಹಿಡಿತದಲ್ಲಿರಿಸಲು ಬಳಸುವ ವೈಧಿಕ ರೂಪಗಳು ಪ್ರೇಕ್ಷಕರ ಎದೆ ಜಲ್ ಎಂಬುವಂತೆ ಮಾಡುವುದರ ಜೊತೆಗೆ ಪ್ರತಿ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಕೊನೆಯವರೆಗೂ ಉಳಿಯುವಂತೆ ಮಾಡುತ್ತದೆ, 

ಈ ಸಿನಿಮಾದಲ್ಲಿ ಒಂದು ಮಾಯಾಲೋಕವನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮರಾಕ್ಷಸ, ಹೆಬ್ಬುಲಿ, ಕಾಡುಪಾಪ ಎಂಬ ಪ್ರಾಣಿಗಳ ಪಾತ್ರಗಳನ್ನು ಕಥೆಗೆ ಸೇರಿಸಿ, ಸಿನಿಮಾದಲ್ಲಿ ಅಡಗಬೇಕಾಗಿದ್ದ ಒಂದು ನಿಗೂಡ ವಿಶೇಷತೆಯನ್ನು ಮೊದಲ ಸಂಚಿಕೆಯಲ್ಲಿ ಬಚ್ಚಿಟ್ಟು, ವಿಷ್ಣು ಅವತಾರದಿಂದ ಅವಿತಿದ್ದ ಕಥೆ, ಮಹಾಶಿವನ ಕಡೆಗೆ ವಾಲಿ, ಕೊನೆಗೆ  ಚಾಮುಂಡಿ ದೇವಿಯ ಉಗ್ರ ರೂಪವನ್ನು ತಂದು ಸಿನಿಮಾದ ಕೊನೆಯ 20 ನಿಮಿಷ ಪ್ರತಿ ಪ್ರೇಕ್ಷಕನ ಹೃದಯ ಬಡಿತವನ್ನು ರಿಷಬ್ ಶೆಟ್ಟಿ ತನ್ನ ಅಭಿನಯದೊಂದಿಗೆ ಹತೋಟಿಗೆ ಹಿಡಿದಿಟ್ಟುಕೊಂಡು ಪ್ರೇಕ್ಷಕರ ಮನದಲ್ಲಿ ಹುಬ್ಬೇರಿಸುವಂತೆ ರೋಮಾಂಚನಗೊಳಿಸಿದ್ದಾರೆ, ವಿಶೇಷವಾಗಿ ಹುಲಿಯ ಸನ್ನಿವೇಶಗಳು ಗ್ರಾಫಿಕ್ ರೀತಿ ಕಾಣದೆ, ನೈಜ ದೃಶ್ಯಗಳು ಅನ್ನುವ ರೀತಿಯಲ್ಲಿ ಗ್ರಾಫಿಕ್ ಅಳವಡಿಸಿರುವುದು ನಿಜಕ್ಕೂ ರಿಷಬ್ ರವರ ಕೆಲಸಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. 

ಒಬ್ಬ ಪ್ರೇಕ್ಷಕ 3 ಗಂಟೆ ಸಮಯವನ್ನು ಪಕ್ಕಕ್ಕೆ ಇಟ್ಟು ಸಿನಿಮಾವನ್ನು ನೋಡಲು ಹೊರಟರೆ, ಈ ಸಿನಿಮಾದ ಕಥೆಯಲ್ಲಿ ಒಂದು ಹೊಸ ಪ್ರಪಂಚವನ್ನು ನೋಡಬಹುದು, ಸಿನಿಮಾದಲ್ಲಿ ಪ್ರತಿಯೊಬ್ಬರ ಪಾತ್ರ ವಿಶ್ಲೇಷಣೆ ತುಂಬ ವಿಭಿನ್ನವಾಗಿದ್ದು, ಅದರಲ್ಲೂ ಸಿನಿಮಾ ನಾಯಕಿಯ ಪಾತ್ರ ಮಾಡಿರುವಂತ ರುಕ್ಮಿಣಿ ವಸಂತ ರವರ ಸುಂದರ ಕಣ್ಣು, ಮನ ಮೋಹಕವಾಗಿ ಸೆಳೆಯುವ ಅವರ ನೋಟ, ನೋಡ ನೋಡುತ್ತಿದ್ದಂತೆ ಅವರ ಪಾತ್ರ ಹಠಾತ್ತನೆ ಖಳನಾಯಕಿಯಾಗಿ ಮಾರ್ಪಾಡು ಆಗುವಂಥ ದೃಶ್ಯ, ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡುತ್ತದೆ. 

ಹಾಸ್ಯ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲಯಾಳಂ ಜಯರಾಮ್ ಸುಬ್ರಮಣಿ ರವರು ಈ ಸಿನಿಮಾದಲ್ಲಿ ಒಬ್ಬ ರಾಜನ ತಂದೆಯ ಪಾತ್ರದೊಂದಿಗೆ ಖಳ ನಟನಾಗಿ ಸಿನಿಮಾದ ಕೊನೆಯಲ್ಲಿ 25 ನಿಮಿಷ ಎಲ್ಲರ ಗಮನ ಸೆಳೆಯುತ್ತಾರೆ, ಇನ್ನು ಉಳಿದಂತೆ ಹಾಸ್ಯ ಕಲಾವಿದರಾದಂತ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಹಾಗೂ ದಿವಂಗತ ರಾಕೇಶ ಪೂಜಾರಿ ಮತ್ತು ಇನ್ನೂ ಹಲವರು ಅವರವರ ಪಾತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಪಾತ್ರಗಳಿಗೆ ಶಕ್ತಿ ತುಂಬಿದ್ದಾರೆ. 

ಛಾಯಾಗ್ರಹಣ: ದೃಶ್ಯ ಭಾಷೆ, ಕ್ಯಾಮೆರಾ ಕೆಲಸ, ಬಣ್ಣದ ಬಳಕೆ ಮತ್ತು ಬೆಳಕಿನ ದೃಶ್ಯಗಳ ಕಥೆ, ಹಳೆಯ ಕಾಂತಾರ ಚಿತ್ರದ ತರ ಅನ್ನಿಸಿದರೂ ಸಹ, ಹಲವು ದೃಶ್ಯಗಳು ಚಿತ್ರದ ಕಥೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ ಎಂದು ಪ್ರೇಕ್ಷಕ ಒಪ್ಪಿಕೊಳ್ಳಲೇ ಬೇಕು ಅನ್ನುವಂತ ಛಾಯಾಗ್ರಹಣವಿದೆ, 

ನಿಜವಾಗಿ ಹೇಳಬೇಕೆಂದರೆ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಿರ್ದಿಷ್ಟ ವರದಿ ಮತ್ತು ಕಣ್ಣುಗಳಿಗೆ ಕಟ್ಟುವಂತೆ ಕಾಡುವ ಸರಳ, ಸ್ಪಷ್ಟ, ಹಾಗೂ ನೆಚ್ಚಿನ ಛಾಯಾಗ್ರಹಣವಿದೆ, ಸ್ಕ್ರಿಪ್ಟ್  ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಿದೆ, ಮತ್ತು ಸಂಭಾಷಣೆ  ಕಥೆಯನ್ನು ಪರಿಣಾಮಕಾರಿಯಾಗಿ ಮುಂದಕ್ಕೆ ಕೊಂಡೊಯ್ದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, 

ಚಿತ್ರದ ಸಂಗೀತ, ಧ್ವನಿ ವಿನ್ಯಾಸ ವಿಷಯಕ್ಕೆ ಬರುವುದಾದರೆ, ನಮ್ಮ ಅಜನೀಶ್ ಲೋಕನಾಥ್ ಮತ್ತೊಮ್ಮೆ ಒಂದು ಸಂಗೀತ ಲೋಕವನ್ನು ಸೃಷ್ಟಿಸಿದ್ದಾರೆ, ಅದರಲ್ಲೂ ಬ್ಯಾಂಕ್ಗ್ರೌಂಡ್ ಮ್ಯೂಸಿಕ್ ಸಖತ್ ಮಜಾ ಕೊಡುತ್ತದೆ, ಅಲ್ಲಲ್ಲಿ ಹಳೆಯ ಕಾಂತಾರ ಸಂಗೀತ ರಿಪೀಟ್ ಆಗಿದ್ದರು ಸಹ ಈ ದೃಶ್ಯಗಳಿಗೆ ಅದು ಬೇಕಾಗಿತ್ತು ಎನ್ನಿಸುತ್ತದೆ,  

ಒಟ್ಟಾರೆಯಾಗಿ, ಫಸ್ಟ್ ಆಫ್ ನಲ್ಲಿ ಕಥೆ ಸೊಗಸಾಗಿ ಕಾಣುತ್ತದೆ ನಂತರ ಸೆಕೆಂಡ್ ಆಫ್ ನಲ್ಲಿ ನಿಜವಾದ ಕಾಂತಾರವನ್ನು ಅದ್ಬುತವಾಗಿ ತೋರಿಸುತ್ತಾರೆ, ಅದರಲ್ಲೂ ಕೊನೆಯ 25 ನಿಮಿಷ ಎಲ್ಲರ ಕುತೂಹಲ ಪ್ರತಿ ದೃಶ್ಯದ ಮೇಲೆ ಆವರಿಸಿರುತ್ತದೆ, ಕಣ್ಣಿನ ರೆಪ್ಪೆಗಳಿಗೆ ಕೆಲಸವಿಲ್ಲದಂತೆ ಅನ್ನಿಸುತ್ತದೆ, ಆ ರೀತಿಯಲ್ಲಿ ಸಿನಿಮಾದ ಮೇಕಿಂಗ್ ಇದೆ, ಸಾಹಸ ದೃಶ್ಯಗಳು ಸ್ವಲ್ಪ ಬಾಹುಬಲಿಯ ರೂಪದಲ್ಲಿ ಕಂಡುಬರುತ್ತವೆ.