ಬೆಂಗಳೂರು, ಮಾರ್ಚ್ 8, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ರಂಗಶ್ರೀ ಕಲಾಸಂಸ್ಥೆ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಶ್ರೀ ಕಲಾಸಂಸ್ಥೆ ವತಿಯಿಂದ ಪದ್ಮಶ್ರೀ ಡಾ || ದೊಡ್ಡರಂಗೇಗೌಡರ ಜನ್ಮದಿನೋತ್ಸವದ ಅಂಗವಾಗಿ "ಚೈತ್ರ ಪೂರ್ವ ಸಂಭ್ರಮ ರಾಷ್ಟ್ರಕವಿ ಕುವೆಂಪು (ಕಂಚಿನ ಪ್ರತಿಮೆ) ಪ್ರಶಸ್ತಿ ಪ್ರದಾನ ಸಮಾರಂಭ - 2025" ನಡೆಯಲಿದೆ. 

ಶಿಕ್ಷಣ ತಜ್ಞೆ ಪ್ರೊ|| ಚಿ.ನಾ. ಮಂಗಳ ಅವರಿಂದ 'ರಂಗಶ್ರೀ' ಎಂದು ನಾಮಾಂಕಿತಗೊಂಡ ಸಂಸ್ಥೆ. ಅವರ ಹರಕೆ, ಹಾರೈಕೆಗಳಿಂದ ನಾಲ್ಕು ದಶಕಗಳ ನಿರಂತರ ಕಲಾಸೇವೆಯನ್ನು ಮುಂದುವರೆಸಿದೆ. ನಟಭೈರವ ವಜ್ರಮುನಿಯವರ ಆಶೀರ್ವಾದವೇ ರಂಗಶ್ರೀ ಸಂಸ್ಥೆಯ ಬೆಳವಣಿಗೆಯ ಮೂಲಬೀಜ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರು ತಮಗಾಗಿ ವಿರಚಿಸಿದ್ದ 'ಪ್ರಚಂಡ ರಾವಣ' ಕೃತಿಯನ್ನು ರಂಗಶ್ರೀ ಸಂಸ್ಥೆಗೆ ಬಳುವಳಿಯನ್ನಾಗಿ ಕೊಟ್ಟು ರಂಗಶ್ರೀ ಸಂಸ್ಥೆಯನ್ನು ಮುನ್ನಡೆಸಿದರು. ರಂಗಶ್ರೀ ರಂಗಸ್ವಾಮಿ ಈ ಕೃತಿಯನ್ನು 800 ಕ್ಕೂ ಹೆಚ್ಚು ಪ್ರದರ್ಶನ ಮಾಡುವ ಮೂಲಕ ಸಂಸ್ಥೆಯನ್ನು ಮುನ್ನಡೆಸಿದರು. ಅವರಿಂದ ಬಂದ ಕೃತಿಯನ್ನು ಅವರ ಮೊಮ್ಮಗನಿಗೆ ನೀಡಿ ಅವನನ್ನು ಪ್ರಚಂಡ ರಾವಣನನ್ನಾಗಿಸಿ ಗುರುಕಾಣಿಕೆಯನ್ನು ಕೊಟ್ಟದ್ದು ರಂಗಶ್ರೀ ಸಂಸ್ಥೆಯ ಗುರುಶಿಷ್ಯ ಪರಂಪರೆ.

ದಯಾನಂದ ಸಾಗರ್ ಪ್ರತಿಷ್ಠಾನದ ಡಾ॥ ಹೇಮಚಂದ್ರ ಸಾಗರ್, ಡಾ॥ ಪ್ರೇಮಚಂದ್ರ ಸಾಗರ್ ಅವರ ಸಹಕಾರ, ಸಹಯೋಗವು ರಂಗಶ್ರೀ ಸಂಸ್ಥೆಯ ಬೆಳವಣಿಗೆಯ ಮಹತ್ತರ ಮೆಟ್ಟಿಲುಗಳು. ಅದು ಈಗಲೂ ಮುಂದುವರೆದು ಅವರ ಮುಂದಿನ ತಲೆಮಾರು ಕೂಡ ರಂಗಶ್ರೀ ಸಂಸ್ಥೆಯ ಪೋಷಕರಾಗಿ ಮುಂದುವರೆದಿರುವುದು ಸಂಸ್ಥೆಯ ಹೆಗ್ಗಳಿಕೆ. ಇವರೆಲ್ಲರ ಸಹಕಾರದಿಂದ ರಂಗಶ್ರೀ ನಾಲ್ಕು ದಶಕಗಳ ನಿರಂತರ ಸೇವೆಯನ್ನು ಮುನ್ನಡೆಸಿ ಮುನ್ನುಗಿದೆ. ಸತತವಾಗಿ ಕ್ರಿಯಾಶೀಲರಾಗಿರುವ ರಾಜ್ಯದ ಕೆಲವೇ ಕೆಲವು ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವುದರ ಜೊತೆಗೆ ತನ್ನ ಸಾಂಸ್ಕೃತಿಕ ಸೇವಾ ಸಾಧನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ.

ಪ್ರತಿ ವರ್ಷವೂ ಸಂಸ್ಥೆಯು ನಡೆಸುವ ಸಾಂಸ್ಕೃತಿಕ ಮಹೋತ್ಸವ, ನಾಟಕ ಸ್ಪರ್ಧೆ, ಭಜನಾ ಮೇಳ, ಪೌರಾಣಿಕ ನಾಟಕ ಸ್ಪರ್ಧೆ, ವಿವಿಧ ವಿನೋದಾವಳಿಗಳಿಂದ ಸಾವಿರಾರು ಹೊಸ ಪ್ರತಿಭೆಗಳನ್ನು ಗುರುತಿಸಲಾಗಿದೆ. ರಂಗಶ್ರೀ ಸಂಸ್ಥೆಯಿಂದ ಬೆಳಕಿಗೆ ಬಂದ ನೂರಾರು ಪ್ರತಿಭೆಗಳು ಕಿರುತೆರೆ, ಬೆಳ್ಳಿತೆರೆಯ ಪ್ರಸಿದ್ಧರಾಗಿರುವುದು ಹೆಮ್ಮೆಯ ಸಂಗತಿ. ರಂಗಶ್ರೀ ಸಂಸ್ಥೆಯು ಪ್ರತಿವರ್ಷವೂ ಗಣ್ಯರಿಗೆ ನೀಡುವ ರಂಗಶ್ರೀ ಪ್ರಶಸ್ತಿ ಹಾಗೂ ಸಾಗರ್ ಪ್ರತಿಷ್ಠಾನದ ಸಹಯೋಗದಲ್ಲಿನ ಸಾಗರ್ ಪ್ರಶಸ್ತಿಗೆ ನೂರಾರು ಮಂದಿ ಸಾಧಕರು ಪಾತ್ರರಾಗಿ ಪ್ರಶಸ್ತಿಗೆ ಶೋಭೆ ತಂದಿದ್ದಾರೆ. ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಸಂಗೀತ, ವಿಜ್ಞಾನ, ಆಧ್ಯಾತ್ಮ, ಸಮಾಜಸೇವೆ, ರಾಜಕೀಯ ಕ್ಷೇತ್ರಗಳ ಸಾಧಕ ಮಹನೀಯರಿಗೆ ಬೆಳ್ಳಿ ಕಡಗ ತೊಡಿಸಿ. ಸತ್ಕರಿಸಿದ ಸೌಭಾಗ್ಯ ನಮ್ಮದು. ಪೌರಾಣಿಕ ರಂಗಕಲಾವಿದರಿಗೆ ಒಂದೇ ವೇದಿಕೆಯಲ್ಲಿ ನೂರಾರು ಪ್ರಶಸ್ತಿಗಳನ್ನು ನೀಡಿ ಸತ್ಕರಿಸಿದ ಹೆಮ್ಮೆ ನಮ್ಮದು. ಸಾಂಸ್ಕೃತಿಕ ಹಾಗೂ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ಷೇತ್ರಗಳಲ್ಲೂ ರಂಗಶ್ರೀ ಇತಿಹಾಸದ ಕಾರ್ಯಕ್ರಮಗಳನ್ನು ನಡೆಸಿದೆ.

2025 ರ ಚೈತ್ರಪೂರ್ವ ಸಂಭ್ರಮದ ಅಂಗವಾಗಿ ಈ ಬಾರಿ ನಾಡಿನ ಅಪ್ರತಿಮ ಸಾಧಕರಿಗೆ ಕುವೆಂಪು ಕಂಚಿನ ಪುತ್ಥಳಿಯೊಂದಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿ ಸತ್ಕರಿಸಲು ತೀರ್ಮಾನಿಸಲಾಗಿದೆ. ಈ ಸಭಾ ಕಾರ್ಯಕ್ರಮವು ಮಾರ್ಚ್ 10 ರ ಸಂಜೆ 5:00 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿದ್ದು ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಮತ್ತು ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ಡಾ|| ಎಸ್.ಎಲ್.ಎನ್ ಸ್ವಾಮಿ ಹೊರತಂದಿರುವ ಗೌರಮ್ಮ ಮಲ್ಲಪ್ಪ ಸ್ಮರಣಾರ್ಥ 'ಕರ್ನಾಟಕ ಧರ್ಮದರ್ಶನ' ಧ್ವನಿರೂಪದ ಪುಸ್ತಕವನ್ನು ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್, ಮಾನ್ಯ ಉಪಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯವರು ಅಧ್ಯಕ್ಷತೆ ವಹಿಸಲಿದ್ದು, ಸನ್ಮಾನ್ಯ ಶ್ರೀ ಹೆಚ್.ಎಂ. ರೇವಣ್ಣನವರು ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ.

ಪದ್ಮಶ್ರೀ ಡಾ॥ ದೊಡ್ಡರಂಗೇಗೌಡರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡರಿಗೆ ನ್ಯಾಯಾಂಗ ಕ್ಷೇತ್ರದ ಸಾಧನೆಗಾಗಿ, ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್, ಸಹಕಾರ ಕ್ಷೇತ್ರದ ಸಾಧನೆಗಾಗಿ, ಡಾ॥ ಜಯಮಾಲ, ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ, ಸನ್ಮಾನ್ಯ ಶ್ರೀ ಕೆ.ಎಂ. ನಾಗರಾಜ್, ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಹಾಗೂ ಸನ್ಮಾನ್ಯ ಡಾ|| ಕೆ.ಎಸ್. ಕಿಶೋರ್, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಕುವೆಂಪು ಪ್ರಶಸ್ತಿಗೆ ಭಾಜನರಾಗಿರುತ್ತಾರೆ.