ಬೆಂಗಳೂರು, ಫೆಬ್ರವರಿ 27, 2025

'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಸಂಭ್ರಮಾಚರಣೆಯಲ್ಲಿ 10,000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ಘಟಕದ ಸಹಯೋಗದಲ್ಲಿ ಎರಡನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟ (ಕೆಎಸ್‌ಪಿ ರನ್)ವನ್ನು 2025ರ ಮಾರ್ಚ್ 9ರ ಭಾನುವಾರ ಹಮ್ಮಿಕೊಂಡಿದೆ. 2024ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೊದಲ ಬಾರಿ ಈ ಓಟವನ್ನು ಆಯೋಜಿಸಲಾಗಿತ್ತು. ಈ ವರ್ಷ 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಘೋಷವಾಕ್ಯದಡಿ ರಾಜ್ಯವನ್ನು ಸುರಕ್ಷಿತವಾಗಿರಿಸಲು ಶ್ರಮಿಸುತ್ತಿರುವ ಪೊಲೀಸರಿಗೆ ಗೌರವ ಸೂಚಿಸಲು ಎರಡನೇ ಆವೃತ್ತಿಯ ಓಟವನ್ನು ಹಮ್ಮಿಕೊಳ್ಳಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಹಯೋಗದಲ್ಲಿ, ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಮತ್ತು ಯುವಜನ ಸೇವೆಗಳ ಇಲಾಖೆ ಕೂಡ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

ಮಾರ್ಚ್ 9ರ ಭಾನುವಾರ ಹಮ್ಮಿಕೊಂಡಿರುವ ಓಟದಲ್ಲಿ ಎಲ್ಲಾ ವಯೋಮಾನದ 10.000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿ ಡಾ.ಅಲೋಕ್ ಮೋಹನ್ ಹಾಗೂ ಎಸ್‌ಬಿಐ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ ಗುರುವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಲಮಿತಿಯ 10 ಕಿ.ಮೀ. ಓಟವವನ್ನು ವೃತ್ತಿಪರ ಓಟಗಾರರಿಗಾಗಿ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ, ಎಲ್ಲರಿಗೂ ಪಾಲ್ಗೊಳ್ಳಲು ಅವಕಾಶ ನೀಡುವ 5 ಕಿ.ಮೀ. ಜಾಗೃತಿ ಓಟವಿದೆ. ಎರಡೂ ಓಟಗಳು ವಿಧಾನಸೌಧದಿಂದ ಆರಂಭವಾಗಿ, ಕಬ್ಬನ್‌ ಪಾರ್ಕ್‌ನಲ್ಲಿ ಸಂಚರಿಸಲಿವೆ. ಈ ವೇಳೆ ಹಸಿರು ಬೆಂಗಳೂರು, ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮತ್ತು ವೃದ್ಧರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತದೆ. ನೋಂದಾಯಿತ ಪ್ರತಿಯೊಬ್ಬ ಸ್ಪರ್ಧಿಗೂ ಟಿ-ಶರ್ಟ್, ಫಿನಿಶರ್ ಮೆಡಲ್ ಮತ್ತು ಉಚಿತ ರಿಫ್ರೆಶ್ ಮೆಂಟ್‌ಗಳನ್ನು ನೀಡಲಾಗುತ್ತದೆ.

ಟಿ-ಶರ್ಟ್ ಮತ್ತು ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಡಾ.ಅಲೋಕ್ ಮೋಹನ್, 'ಆರೋಗ್ಯ, ಸಹಬಾಳ್ವೆ, ಸಾಮರಸ್ಯ ಮತ್ತು ಸುರಕ್ಷಿತ ಕರ್ನಾಟಕಕ್ಕಾಗಿ 2ನೇ ಆವೃತ್ತಿಯ ಕರ್ನಾಟಕ ಪೊಲೀಸ್ ಓಟವನ್ನು ಆಯೋಜಿಸಲಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ಬದಲಿಗೆ ಪೊಲೀಸರು ರಾಜ್ಯದ ಸುರಕ್ಷತೆಗಾಗಿ ದಣಿವರಿಯದೆ ಮಾಡುತ್ತಿರುವ ಕೆಲಸಕ್ಕೆ ಗೌರವ ಸೂಚಿಸುವ ಕಾರ್ಯಕ್ರಮವೂ ಆಗಿದೆ. ಪೊಲೀಸರ ಜೊತೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡುತ್ತೇನೆ' ಎಂದು ಹೇಳಿದರು. ಈ ವೇಳೆ, ಎಸ್‌ಬಿಐ ಬೆಂಗಳೂರು ಘಟಕದ ಚೀಫ್ ಜನರಲ್ ಮ್ಯಾನೇಜರ್ ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ ಉಪಸ್ಥಿತರಿದ್ದರು.

ಬಹುಮಾನದ ವಿವರ: 10 ಕಿ.ಮೀ. ಕಾಲಮಿತಿಯ ಓಟದಲ್ಲಿ ಗೆಲ್ಲುವ ಪುರುಷರು, ಮಹಿಳೆಯರು, ಪುರುಷ ಪೊಲೀಸರು,

ಮಹಿಳಾ ಪೊಲೀಸರು ಹಾಗೂ ಎಸ್‌ಬಿಐನ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಮೊದಲ ಬಹುಮಾನ, 50,000 ರೂ. ಎರಡನೇ ಬಹುಮಾನ ಮತ್ತು 30,000 ರೂ. ಮೂರನೇ ಬಹುಮಾನವಿರುತ್ತದೆ. 5 ಕಿ.ಮೀ. ಓಟದಲ್ಲಿ ಗೆಲ್ಲುವವರಿಗೆ ಇವೇ ವಿಭಾಗಗಳಲ್ಲಿ 40,000 ರೂ. ಮೊದಲ ಬಹುಮಾನ, 25,000 ರೂ. ಎರಡನೇ ಬಹುಮಾನ, 20,000 ರೂ. ಮೂರನೇ ಬಹುಮಾನ, 10,000 ರೂ. ನಾಲ್ಕನೇ ಬಹುಮಾನ ಮತ್ತು 5000 ರೂ. ಐದನೇ ಬಹುಮಾನವಿರುತ್ತದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೂ ಪ್ರತ್ಯೇಕ ಬಹುಮಾನಗಳಿವೆ.