ಬೆಂಗಳೂರು, ಫೆಬ್ರವರಿ 24, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾಸಂಘ (ರಿ)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

   ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣ್ ಅವರು ಮಾತನಾಡಿದರು. 

ರಾಜ್ಯ ಸರ್ಕಾರವು ಮುಂದಿನ ಬಜೆಟ್ ನಲ್ಲಿ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. 

ತಮಗೆಲ್ಲಾ ತಿಳಿದಿರುವಂತೆ ರಾಜ್ಯದ ನಗರಗಳು ಮತ್ತು ಗ್ರಾಮೀಣ ಭಾಗದಲ್ಲಿ ಕಸಗುಡಿಸುವುದು. ತೆರೆದ ಚರಂಡಿ, ಒಳಚರಂಡಿ, ಗಟಾರಗಳು, ಸಾರ್ವಜನಿಕ ಶೌಚಾಲಯ ಸೇರಿದಂತೆ ಅನೇಕ ಭಾಗಗಳಲ್ಲಿ ಸ್ವಚ್ಛತಾ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಸಮುದಾಯದವರು ಇಡೀ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡುತ್ತಿರುವ ಆರೋಗ್ಯ ರಕ್ಷಕರಾಗಿದ್ದಾರೆ.

ಕರ್ನಾಟಕ ರಾಜ್ಯ ನಗರ ಸಭೆ-ಪುರಸಭೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಮಹಾಸಂಘವು ಕಳೆದ 20 ವರ್ಷಗಳಿಂದ ನಿರಂತರವಾಗಿ ಗುತ್ತಿಗೆ ಪದ್ಧತಿ ರದ್ದು ಮಾಡಬೇಕು, ಖಾಯಂ ನೌಕರರಾಗಿ ನೇಮಕ ಮಾಡಬೇಕು. ಇತರೆ ಸಾಮಾಜಿಕ ಸೌಲಭ್ಯಗಳಾದ ಕನಿಷ್ಠವೇತನ, ವಸತಿಯೋಜನೆ, ಭವಿಷ್ಯನಿಧಿ, ಆರೋಗ್ಯ ವಿಮೆ. ಬೆಳಗಿನ ಉಪಹಾರದಂತಹ ಯೋಜನೆಗಳನ್ನು ಜಾರಿ ಮಾಡಲು ನಿರಂತರವಾಗಿ ಹೋರಾಟ ನಡೆಸಿದೆ.

ನಮ್ಮ ಸಂಘಟನೆಯ ಪ್ರಬಲವಾದ ಮತ್ತು ರಾಜಿರಹಿತ ಹೋರಾಟದ ಫಲವಾಗಿ 2017-18 ರಿಂದ ರಾಜ್ಯ ಸರ್ಕಾರ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮಾವಳಿಗಳು 2017-18 ಎಂಬ ಪ್ರತ್ಯೇಕ ನಿಯಮ ರೂಪಿಸಿ ಸುಮಾರು 29 ಸಾವಿರ ಪೌರಕಾರ್ಮಿಕರನ್ನು (ಬಿಬಿಎಂಪಿ ಒಳಗೊಂಡಂತೆ) ನೇರನೇಮಕಾತಿ ಅಡಿಯಲ್ಲಿ ಖಾಯಂಗೊಳಿಸಿದೆ. ಉಳಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಖಾಯಂ ಮಾಡುವುದು ಬಾಕಿ ಇದೆ. ಮತ್ತು ರಾಜ್ಯದ ಎಲ್ಲಾ ನಗರಗಳ ಲೋಡರ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಕಸವಿಂಗಡಣೆ ಮಾಡುವವರು, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸ್ವಚ್ಛತಾ ಕಾರ್ಮಿಕರಿಗೆ ಸೂಕ್ತವಾದ ಆರೋಗ್ಯ ಭದ್ರತೆ, ಸುರಕ್ಷತೆ ಇಲ್ಲ, ವಸತಿ ಸೌಲಭ್ಯವಿಲ್ಲದೆ, ಉದ್ಯೋಗಭದ್ರತೆ ಇಲ್ಲದೆ ಅಸಹಾಯಕರಾಗಿದ್ದಾರೆ. ಅತಂತ್ರರಾಗಿದ್ದಾರೆ.