ಬೆಂಗಳೂರು, ಫೆಬ್ರವರಿ 1, 2025 

  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ' ವತಿಯಿಂದ "ಮಹಾ ಸಂಘರ್ಷ ಯಾತ್ರೆ" ಗೆ ರಾಜ್ಯಾಧ್ಯಕ್ಷರಾದ .ಎ. ನಾರಾಯಣಗೌಡರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಟಿ.ಎ. ನಾರಾಯಣಗೌಡರು ಮಾಧ್ಯಮಗಳ ಜತೆಗೆ ಮಾತನಾಡಿದರು. 

ಮೂರು ಮುಖ್ಯ ವಿಷಯಗಳ ಕುರಿತು ಮಾತನಾಡಲು ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ. ಮೂರೂ ವಿಷಯಗಳು ಅತ್ಯಂತ ಪ್ರಮುಖವಾಗಿದ್ದು, ಈ ಬೇಡಿಕೆಗಳು ಈಡೇರುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸುವುದಿಲ್ಲ. ಈ ಚಳವಳಿಯನ್ನು ಯಾವುದೇ ಹಂತಕ್ಕೆ ತೆಗೆದುಕೊಂಡುಹೋಗಲು ನಾವು ಮಾನಸಿಕವಾಗಿ ಸಿದ್ಧವಾಗಿದ್ದೇವೆ. ಈ ಮೂರೂ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಹಂತಹಂತವಾಗಿ ಪ್ರಜಾಸತ್ತತ್ಮಕ ಚಳವಳಿಯನ್ನು ಸಂಘಟಿಸಲಿದ್ದೇವೆ. ಈ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ. ಸರ್ಕಾರಗಳನ್ನು ಮನವೊಲಿಸುವ ಎಲ್ಲ ಕಾರ್ಯವನ್ನೂ ಮಾಡಲಿದ್ದೇವೆ. ಈ ವಿಷಯಗಳ ಕುರಿತು ಕರ್ನಾಟಕ ರಾಜ್ಯದಾದ್ಯಂತ ವ್ಯಾಪಕವಾದ ಪ್ರಚಾರಾಂದೋಲನ ನಡೆಸಲಿದ್ದೇವೆ. ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯಗಳ ಕುರಿತು ಅವರಿಗೆ ತಿಳಿಸಲಿದ್ದೇವೆ.

ಈ ಚಳವಳಿಗೆ ಆರಂಭಿಕ ಹಂತದಲ್ಲೇ ಸರ್ಕಾರಗಳು ಸ್ಪಂದಿಸಿ ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೊಂದಿರುವುದಿಲ್ಲ. ಆದರೆ ಸರ್ಕಾರಗಳು ನಿರ್ಲಕ್ಷ್ಯ ತೋರಿದರೆ, ಅಸಡ್ಡೆಯಿಂದ ವರ್ತಿಸಿದರೆ ನಾವು ನಮ್ಮ ಚಳವಳಿಯನ್ನು ಅನಿವಾರ್ಯವಾಗಿ ತೀವ್ರಗೊಳಿಸುತ್ತೇವೆ. ಮುಂದೆ ಆಗುವ ಸಮಸ್ಯೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಜವಾಬ್ದಾರಿಯಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇನೆ.

ನಮ್ಮ ಮೂರು ಹಕ್ಕೊತ್ತಾಯಗಳು ಈ ಕೆಳಕಂಡಂತಿವೆ:

1. ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು.

ನೀವೆಲ್ಲ ಗಮನಿಸಿರುವಂತೆ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗ್ಗೆಯ ಉತ್ಪನ್ನಗಳ ಮೇಲೆ ಬರೆಯಲಾಗುವ ಹೆಸರುಗಳು, ಉತ್ಪನ್ನಗಳಿಗೆ ಸಂಬಂಧಿಸಿದ ವಿವರಗಳು, ಉತ್ಪನ್ನ ಗಳನ್ನು ತಯಾರು ಮಾಡಲು ಬಳಸಿದ ವಸ್ತುಗಳ ಹೆಸರು ಮತ್ತು ಪ್ರಮಾಣ, ಉತ್ಪನ್ನಗಳ ತೂಕ/ ಪ್ರಮಾಣ ಮತ್ತು ಬೆಲೆ ಎಲ್ಲವನ್ನೂ ಬಹುತೇಕ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ನಾವು ಕರ್ನಾಟಕದಲ್ಲಿ ಇದ್ದೇವೋ ಅಥವಾ ಅಮೆರಿಕದಲ್ಲಿ ಇದ್ದೇವೋ ಎಂಬ ಅನುಮಾನ ಕಾಡುವಷ್ಟು ಇಂಗ್ಲಿಷ್ ಎಲ್ಲ ಉತ್ಪನ್ನಗಳ ಮೇಲೆ ತುಂಬಿಕೊಂಡಿವೆ. ಇದಕ್ಕೆ ಯಾರು ಕಾರಣ?

ಇದನ್ನು ಯಾಕೆ ನಾವು ಸಹಿಸಿಕೊಂಡು ಬಂದಿದ್ದೇವೆ? ಸರ್ಕಾರಗಳು ಇದನ್ನೆಲ್ಲ ನೋಡಿ ಕಣ್ಮುಚ್ಚಿ ಕುಳಿತಿರುವುದು

ಉತ್ಪನ್ನಗಳ ಮೇಲೆ ಮುದ್ರಿಸಲಾಗುವ ಭಾಷೆಗಳಿಗೆ ಸಂಬಂಧಿಸಿದಂತೆ ಜಗತ್ತಿನ ನಾನಾ ದೇಶಗಳು ಬಳಸುವ ಮಾರ್ಗಸೂಚಿಗಳನ್ನು ನಾವು ಗಮನಿಸಬಹುದು, ಎಲ್ಲೂ ಸಹ, ತಮ್ಮ ದೇಶದ್ದಲ್ಲದ, ಸ್ಥಳೀಯವಲ್ಲದ ಭಾಷೆಗಳನ್ನು ಬಳಸಲಾಗುತ್ತಿಲ್ಲ. ಹೀಗಿದ್ದ ಮೇಲೆ ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಏಕಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐ ಎಸ್ ಓ) ಉತ್ಪನ್ನಗಳ ಮೇಲೆ ಮುದ್ರಿಸುವ ಭಾಷೆ ಸ್ಥಳೀಯದ್ದೇ ಆಗಿರಬೇಕು. ಸ್ಥಳೀಯ ಜನರು ಓದಿ ಅರ್ಥ ಮಾಡಿಕೊಳ್ಳುವಂಥ ಭಾಷೆ ಆಗಿರಬೇಕು ಎಂದು ಶಿಫಾರಸು ಮಾಡುತ್ತದೆ.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಬು ಟಿ ಓ) ಮಾರ್ಗಸೂಚಿಗಳು ಕೂಡ ಇದನ್ನೇ ಹೇಳುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಸಂದರ್ಭದಲ್ಲೂ ಉತ್ಪನ್ನಗಳ ಮೇಲಿನ ಬರೆಹಗಳು ಆಮದು ಮಾಡಿಕೊಳ್ಳುವ ದೇಶದ ಭಾಷೆಯಲ್ಲಿರಬೇಕು ಎಂದು ಅದು ಹೇಳುತ್ತದೆ. ಉದಾಹರಣೆಗೆ ಅಮೆರಿಕ ದೇಶವು ಚೀನಾದಿಂದ ಏನನ್ನಾದರೂ ಆಮದು ಮಾಡಿಕೊಳ್ಳುತ್ತಿದ್ದರೆ ಆ ಉತ್ಪನ್ನಗಳ ಮೇಲಿನ ಬರೆಹ ಚೀನೀ ಭಾಷೆಯಲ್ಲಿರಬಾರದು, ಬದಲಾಗಿ ಅಮೆರಿಕದವರಿಗೆ ಅನುಕೂಲವಾಗುವ ಹಾಗೆ ಇಂಗ್ಲಿಷ್ ಭಾಷೆಯಲ್ಲಿರಬೇಕು.

ಜಪಾನ್ ದೇಶದ ಉತ್ಪನ್ನಗಳ ಮೇಲಿನ ಬರೆಹಗಳು ಜಪಾನೀಸ್ ಭಾಷೆಯಲ್ಲೇ ಇರುತ್ತವೆ. ಅದು ಆಮದು ಮಾಡಿಕೊಳ್ಳುವ ಸರಕುಗಳಿಗೆ ಮಾತ್ರ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಚೀನಾ ದೇಶದ ಉತ್ಪನ್ನಗಳ ಮೇಲಿನ ಬರೆಹ ಮ್ಯಾಂಡರಿನ್ (ಚೈನೀಸ್) ಭಾಷೆಯಲ್ಲೇ ಇರುತ್ತದೆ. ಆಫ್ರಿಕಾ ದೇಶಗಳು ಬ್ರಿಟಿಷ್ ವಸಾಹತುಗಳಾಗಿದ್ದ ಕಾರಣದಿಂದ ಅಲ್ಲಿ ಇಂಗ್ಲಿಷ್ ಬಳಕೆ ಇದ್ದರೂ, ಸ್ಥಳೀಯ ಭಾಷೆಗಳನ್ನೂ ಸಹ ಬಳಸಲಾಗುತ್ತಿದೆ. ಇದೇ ರೀತಿ ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳಲ್ಲಿ ಇಂಗ್ಲಿಷ್ ಉಳಿದುಕೊಂಡಿದ್ದರೂ ಸ್ಥಳೀಯ ಭಾಷೆಗಳನ್ನೂ ಬಳಸಲಾಗುತ್ತದೆ.

ಉತ್ಪನ್ನಗಳ ಮೇಲೆ ಬರೆಯುವ ಭಾಷೆ ಸ್ಥಳೀಯವೇ ಆಗಿರಬೇಕು ಎಂಬುದು ಜಾಗತಿಕವಾಗಿ ಒಪ್ಪಿ ಅನುಸರಿಸಲಾಗುವ ತತ್ತ್ವ, ಇದಕ್ಕೆ ಕಾರಣವೂ ಸ್ಪಷ್ಟ ಯಾರಿಗೆ ನೀವು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೀರೋ ಅವರಿಗೆ ಆ ವಸ್ತುಗಳ ಹೆಸರು ಏನೆಂಬುದು ಸ್ಪಷ್ಟವಾಗಿ ತಿಳಿಯಬೇಕು. ಉತ್ಪನ್ನಗಳಿಗೆ ಸಂಬಂಧಿಸಿದ ವಿವರಗಳು, ಉತ್ಪನ್ನ ಗಳನ್ನು ತಯಾರು ಮಾಡಲು ಬಳಸಿದ ವಸ್ತುಗಳ ಹೆಸರು ಮತ್ತು ಪ್ರಮಾಣ, ಉತ್ಪನ್ನಗಳ ತೂಕ/ ಪ್ರಮಾಣ ಮತ್ತು ಬೆಲೆ ಗೊತ್ತಾಗಬೇಕು.

ಆದರೆ ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ರೀತಿಯ ಉತ್ಪನ್ನಗಳ ಮೇಲೆ ಕನ್ನಡದ ಅಕ್ಷರಗಳನ್ನು ಬೂದುಗಾಜಲ್ಲಿ ಹುಡುಕಿದರೂ ಸಿಗುವುದಿಲ್ಲ. ಎಲ್ಲೋ ಬೆರಳೆಣಿಕೆಯ ಕೆಲವು ವಸ್ತುಗಳ ಮೇಲೆ ಕನ್ನಡ ಇರಬಹುದು: ನೂರಕ್ಕೆ 99 ರಷ್ಟು ವಸ್ತುಗಳ ಮೇಲಿನ ಬರೆಹಗಳು ಇಂಗ್ಲಿಷ್ ನಲ್ಲಿವೆ, ಕೆಲವು ವಸ್ತುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಕನ್ನಡವಿಲ್ಲ.