ಜೂನ್ 15, 2024
ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಇಂದು ಹಮ್ಮಿಕೊಂಡಿದ್ದ "ದಕ್ಷಿಣ ಭಾರತ ಉತ್ಸವ-2024" ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉದ್ಘಾಟನೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮದಲ್ಲಿ ದಕ್ಷಿಣ ಭಾರತದ ರಾಜ್ಯಗಳು ವಿಭಿನ್ನವಾಗಿದ್ದು, ಅದರಲ್ಲೂ ಕರ್ನಾಟಕ ರಾಜ್ಯ ಸಂಸ್ಕೃತಿಯ ಸಂಗಮವಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ದಕ್ಷಿಣ ಭಾರತದ ಏಳೂ ರಾಜ್ಯಗಳಲ್ಲಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಇವುಗಳನ್ನ ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಹಾಗೂ ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ಈ ಉತ್ಸವದ ಉದ್ದೇಶವಾಗಿದೆ. ಇಂದು ಏಳು ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳು, ದೇಶ – ವಿದೇಶಗಳ ಗಣ್ಯರು, ಬಂಡವಾಳ ಹೂಡಿಕೆದಾರರು ಭಾಗವಹಿಸಿರುವುದು ಈ ಕಾರ್ಯಕ್ರಮಕ್ಕೆ ಹೆಗ್ಗಳಿಕೆ ತಂದಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯಡಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಈ ಕಾರ್ಯಕ್ರಮ ಇದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಮೂಲ ಧ್ಯೇಯವಾಗಿದ್ದು, ಇದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
"ದಕ್ಷಿಣ ಭಾರತ ಉತ್ಸವ-2024"ದಲ್ಲಿ ಅನೇಕ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದವು. 200ಕ್ಕೂ ಹೆಚ್ಚು ಕಂಪನಿಗಳ ಸ್ಟಾಲ್ ಗಳು ದಕ್ಷಿಣ ಭಾರತ ಉತ್ಸವದಲ್ಲಿದ್ದವು.