ಫೆಬ್ರವರಿ 13, 2024 

ಕರ್ನಾಟಕದಲ್ಲಿ ಸಹಭಾಗಿತ್ವ, ಹೂಡಿಕೆಗೆ ವೇಲ್ಸ್ ಹೆಚ್ಚಿನ ಆಸಕ್ತಿ: ಯುಕೆ ಸಚಿವರ ಜತೆ ಸಚಿವರಾದ ಎಂ.ಬಿ. ಪಾಟೀಲ್ ವಿಚಾರ ವಿನಿಮಯ

ಬೆಂಗಳೂರಿನಲ್ಲಿ ಸಚಿವರಾದ ಎಂ. ಬಿ. ಪಾಟೀಲ್ ಅವರನ್ನು ಯುನೈಟೆಡ್ ಕಿಂಗ್ಡಮ್ ಕಾರ್ಯದರ್ಶಿ (ವೇಲ್ಸ್) ಡೇವಿಡ್ ಡೇವಿಸ್ ಅವರು ಭೇಟಿಯಾದರು. ಉಭಯ ನಾಯಕರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. 

 `ಸೆಮಿಕಂಡಕ್ಟರ್, ವೈಮಾಂತರಿಕ್ಷ, ಆಟೋಮೋಟೀವ್ ಆಹಾರ ಮತ್ತು ಪಾನೀಯ, ಮೆಡ್-ಟೆಕ್, ಫಿನ್-ಟೆಕ್ ಹಾಗೂ ಮರುಬಳಕೆ ಇಂಧನ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ದೇಶದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ' ಎಂದು ಡೇವಿಡ್ ಡೇವಿಸ್ ಅವರು ತಿಳಿಸಿದರು.

ಬೆಂಗಳೂರು ಸಮೀಪ ನಿರ್ಮಾಣವಾಗುತ್ತಿರುವ ಜಾಗತಿಕ ದರ್ಜೆಯ #KHIRಸಿಟಿ ಯಲ್ಲಿ ವೇಲ್ಸ್ ನ ಕಂಪನಿಗಳು ಹೂಡಿಕೆ ಮಾಡಲು ಅವಕಾಶವಿದ್ದು ಈ ಸದವಕಾಶವನ್ನು ಬಳಸಿಕೊಳ್ಳುವಂತೆ ಆಹ್ವಾನಿಸಲಾಯಿತು. ಜೊತೆಗೆ ರಾಜ್ಯದಲ್ಲಿ ಏರೋಸ್ಪೇಸ್, ರಕ್ಷಣೆ ಮತ್ತು ಮಶೀನ್ ಟೂಲ್ಸ್ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶಗಳಿರುವ ಕುರಿತು ಬಗ್ಗೆ ಎಂ. ಬಿ. ಪಾಟೀಲ್ ಅವರು ತಿಳಿಸಿದರು. 

 ಈ ಕಾರ್ಯಕ್ರಮದಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅವರಾದ ಶ್ರೀ ಚಂದ್ರು ಅಯ್ಯರ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್, ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಮತ್ತು ಟೆಸ್ಕೋ, ಎ.ಆರ್.ಎಂ., ಮೈಕ್ರಾನ್ ಕ್ಲೀನ್, ರೋಲ್ಸ್ ರಾಯ್, ಎಚ್ ಎಸ್ ಬಿಸಿ ಮತ್ತು ರೆವೊಲಟ್ ಮುಂತಾದ ಕಂಪನಿಗಳ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.