ಫೆಬ್ರವರಿ 13, 2024
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಗಾಗಿ ಪ್ರತಿಭಟನೆಗಿಳಿದ ಶಾಲಾ ಮಕ್ಕಳು
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರಹಳ್ಳಿ ಗ್ರಾಮದಲ್ಲಿ ಇಂದು ಸರ್ಕಾರಿ ಶಾಲಾ ಕಟ್ಟಡ ಇಲ್ಲವೆಂದು ಶಾಲಾ ಮಕ್ಕಳು ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು.
ತೊರಹಳ್ಳಿ ಗ್ರಾಮದಲ್ಲಿದ್ದ ಹಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು, ಗ್ರಾಮದಲ್ಲಿದ್ದ ಸಮುದಾಯ ಭವನದಲ್ಲಿ ಶಾಲಾ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿತ್ತು. ಆದರೆ ಸಮುದಾಯ ಭವನದ ಒಂದೇ ಕೊಠಡಿಯಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಬೋಧನೆ ಮಾಡಲು ಶಿಕ್ಷಕರಿಗೆ ತೊಂದರೆಯಾಗುತ್ತಿತ್ತು. ಜೊತೆಗೆ ಶಾಲಾ ಮಕ್ಕಳಿಗೂ ಕೂಡ ಪಾಠ ಕೇಳಲು ಅಡೆತಡೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮುರಳಿ ಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಧರ್, ತೊರಹಳ್ಳಿ ಗ್ರಾಮದ ಶಿಕ್ಷಕರು ಸೇರಿದಂತೆ ನೂತನ ಶಾಲಾ ಕಟ್ಟಡ ನಿರ್ಮಿಸಬೇಕೆಂದು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿರುತ್ತಾರೆ.
ತೊರಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯ ಸರ್ಕಾರಿ ಜಮೀನು ಒಂದರಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ 14 ಲಕ್ಷ ರೂಪಾಯಿ ಬಿಡುಗಡೆಯಾಗಿರುತ್ತದೆ.
ಬಿಡುಗಡೆಯಾದ ಹಣದಲ್ಲಿ ಗೋಡೆ ಮಟ್ಟದವರೆಗೆ ಶಾಲಾ ಕಟ್ಟಡ ಕಟ್ಟಲಾಗಿದೆ. ಆದರೆ ತೊರಹಳ್ಳಿ ಗ್ರಾಮದ ರಾಮಚಂದ್ರಪ್ಪ ಎಂಬುವರು ಶಾಲಾ ಕಟ್ಟಡ ನಿರ್ಮಾಣ ಮಾಡಬಾರದೆಂದು ಕಟ್ಟಡ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದ್ದಾರೆ.
ಇದರಿಂದಾಗಿ ಶಾಲಾ ಮಕ್ಕಳು ಶಾಲಾ ಕಟ್ಟಡವಿಲ್ಲದೆ ಪರಿತಪಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತೊರಹಳ್ಳಿ ಗ್ರಾಮದ ಶಾಲಾ ಮಕ್ಕಳು ಶಾಲಾ ಕಟ್ಟಡ ಬೇಕೆಂದು ಪ್ರತಿಭಟನೆ ನಡೆಸಿದರು.