ಜನವರಿ 29, 2024
ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಸ್ವಾಭಿಮಾನಿ ಉದ್ಯಾನವನದಲ್ಲಿ ಫೆಬ್ರವರಿ 10, 11 ರಂದು ಎರಡು ದಿನಗಳ ಕಾಲ “ಪುಸ್ತಕ ಸಂತೆ” ನಡೆಯಲಿದೆ.
ಪುಸ್ತಕ ಸಂತೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಜಿ ಸಂಸದರಾದ ಉಗ್ರಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದರು.
ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೆಚ್.ಎಸ್.ಆರ್ ಬಡಾವಣೆಯು ಅನ್ಯಭಾಷಿಕರ ಪ್ರಾಬಲ್ಯವನ್ನು ಸಾಧಿಸಿರುವುದು ನೀವು ಅರಿಯದ ಸಂಗತಿಯೇನಲ್ಲ! ಪರಭಾಷಿಕರ ಕಾರಣದಿಂದ ಇಲ್ಲಿ ಕನ್ನಡತನವೂ ದಿನೇದಿನೇ ಕ್ಷೀಣಿಸುತ್ತಿದೆ. ಈ ಭಾಗದ ನಮ್ಮ ಮಕ್ಕಳಿಗೆ ಕನ್ನಡದ ಓದು, ಹಬ್ಬಗಳು ಮರೆತೇಹೋಗುತ್ತಿರುವುದು ನಿಜಕ್ಕೂ ಆತಂಕದ ವಿಷಯ. ಆ ಹಿನ್ನಲೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಪಸರಿಸುವ “ಪುಸ್ತಕ ಸಂತೆ” ಎಂಬ ವಿನೂತನ ಕಾರ್ಯಕ್ರಮವನ್ನು ಹೆಚ್.ಎಸ್.ಆರ್ ಬಡವಾಣೆಯ ಸ್ವಾಭಿಮಾನಿ ಉದ್ಯಾನವನದಲ್ಲಿ ಆಯೋಜಿಸಿದ್ದೇವೆ ಎಂದು ಸಂಘಟಕರು ಹಾಗೂ ವೀರಲೋಕ ಬುಕ್ಸ್ ಸಂಸ್ಥಾಪಕರರಾದ ವೀರಕಪುತ್ರ ಶ್ರೀನಿವಾಸ ಅವರು ಹೇಳಿದರು.
ಈ ಪುಸ್ತಕ ಸಂತೆಯಲ್ಲಿ ನಾಡಿನ ಸುಮಾರು ನೂರಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ನೂರಾರು ಸಾಹಿತಿಗಳು ಮತ್ತು ಸಾವಿರಾರು ಓದುಗರು ಅಂದು ಈ ಪುಸ್ತಕ ಸಂತೆಗೆ ಆಗಮಿಸುತ್ತಿದ್ದಾರೆ. ಕನ್ನಡ ಓದುವ ಸಂಸ್ಕೃತಿಯನ್ನು ಪಸರಿಸುವ ದೃಷ್ಠಿಯಿಂದ ಈ ಪುಸ್ತಕ ಸಂತೆಯು ಅತ್ಯಂತ ಮಹತ್ವವಾದದು ವೀರಕಪುತ್ರ ಶ್ರೀನಿವಾಸ ಅವರು ತಿಳಿಸಿದರು.
ಈ ಪುಸ್ತಕ ಸಂತೆಗೆ ಹೆಚ್‌ಎಸ್‌ಆರ್ ಬಡಾವಣೆಯಲ್ಲಿರುವ ಪ್ರಮುಖರೆಲ್ಲರೂ ಜೊತೆಯಾಗಿದ್ದಾರೆ. ಮುಖ್ಯವಾಗಿ ಮಾಜಿ ಸಂಸದರಾದ ಉಗ್ರಪ್ಪನವರು ಈ ಪುಸ್ತಕ ಸಂತೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ವೀರಕಪುತ್ರ ಶ್ರೀನಿವಾಸ ಎಂದು ಹೇಳಿದರು. ಈ ಪುಸ್ತಕ ಸಂತೆಯಲ್ಲಿ ಅನೇಕ ಸಾಹಿತಿಗಳು, ಓದುಗ, ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಆ ಎರಡು ದಿನಗಳಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರಾದ ಅನಿಲ್ ರೆಡ್ಡಿ ಅವರು ಹೇಳಿದರು.
ಪುಸ್ತಕ ಸಂತೆಗೆ ಪೂರಕವಾಗಿ ಎರಡು ದಿನಗಳ ಕಾಲ️ ಗೀತ ಗಾಯನ ಮತ್ತು ಡೊಳ್ಳು ಕುಣಿತ, ಗೊಂಬೆ ಕುಣಿತ ಪ್ರದರ್ಶನಗಳು, ಆಹಾರ ಮೇಳ ಮತ್ತು ಇತರೆ ಆಕರ್ಷಣೆಗಳು ಈ ಪುಸ್ತಕ ಸಂತೆಯಲ್ಲಿ ಇರಲಿವೆ ಎಂದು ಅನಿಲ್ ರೆಡ್ಡಿ ಅವರು ತಿಳಿಸಿದರು.