ಜನವರಿ 20, 2024
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ "ಆರ್ಥಿಕ ಸಂಯುಕ್ತ ತತ್ವ: 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.
ಈ ವಿಚಾರ ಸಂಕಿರಣವು ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ನಡೆಯಿತು.
16ನೇ ಹಣಕಾಸು ಆಯೋಗ ರಚನೆಯಾಗಿರುವ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ವಿತ್ತೀಯ ನೀತಿ ಸಂಸ್ಥೆ ಹಾಗೂ ಆರ್ಥಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ "ಆರ್ಥಿಕ ಸಂಯುಕ್ತ ತತ್ವ : 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಅತ್ಯಂತ ಸಮಯೋಚಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಯುಕ್ತ ಆರ್ಥಿಕ ವರ್ಗಾವಣೆಯಲ್ಲಿನ ವೈಪರೀತ್ಯಗಳನ್ನು ಪರಿಶೀಲಿಸಲು ಕರ್ನಾಟಕ ಗಟ್ಟಿಯಾಗಿ ಪ್ರಾತಿನಿಧ್ಯವನ್ನು ವಹಿಸಬೇಕಿದೆ. ದಕ್ಷತೆಯ ಜೊತೆಗೆ ನೀತಿಗೆ ಸಂಬಂಧಿಸಿದಂತೆ ವರ್ಗಾವಣೆಯ ಅರ್ಹತೆಗಳ ಬಗ್ಗೆ ಸಾಕಷ್ಟು ಒತ್ತು ನೀಡಲು ಇದು ಸುಸಂದರ್ಭ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಹಿಂದಿನ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರಿ ನಷ್ಟವನ್ನು ಅನುಭವಿಸಬೇಕಾಗಿ ಬಂದಿದ್ದು, ಇದನ್ನು 16ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಿದೆ.
14 ನೇ ಹಣಕಾಸು ಆಯೋಗದಡಿ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯು ಶೇ 4.713 ರಿಂದ ಶೇ. 3.647 ಕ್ಕೆ 15 ನೇ ಹಣಕಾಸು ಆಯೋಗದಿಂದಾಗಿ ಇಳಿದಿದೆ.
ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅತ್ಯಂತ ದೊಡ್ಡ ಮೊತ್ತ ಅಂದರೆ ಶೇ 1.066 ರಷ್ಟು ಇಳಿಕೆಯಾಗಿದೆ. ಈಗಿನ ವ್ಯವಸ್ಥೆ ಆದಾಯದ ದೂರ ವ್ಯಾಪ್ತಿಯನ್ನು ಪರಿಗಣಿಸಿಸುತ್ತಿದ್ದು, ಈ ಪ್ರಕಾರ ಕರ್ನಾಟಕವು ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯಕ್ಕೆ ಹೋಲಿಸಿ ಆದಾಯ ಕಡಿಮೆ ದೂರವ್ಯಾಪ್ತಿ ಇರುವ ಕಾರಣ ಸೋಲುತ್ತಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ರೂ.6,21,131ಗೂ ಹೆಚ್ಚಿನ ತಲಾ ಆದಾಯ ಮಟ್ಟವನ್ನು ಕಾಣಬಹುದಾಗಿದೆ ಎನ್ನುವುದನ್ನು ಪರಿಗಣಿಸುವುದು ಮುಖ್ಯ. ಈ ವ್ಯವಸ್ಥೆ ಕರ್ನಾಟಕಕ್ಕೆ ಕೆಲವು ಜಿಲ್ಲೆಗಳಲ್ಲಿ ಕಡಿಮೆಯಿರುವ ತಲಾ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಸಂಪನ್ಮೂಲ ವರ್ಗಾವಣೆಯಿಂದ ವಂಚಿತವಾಗಿಸಿದೆ.
ಅಂತರ ರಾಜ್ಯ ತಲಾ ಆದಾಯ ವ್ಯತ್ಯಾಸಗಳಿಗೆ ಹಣಕಾಸು ಆಯೋಗಗಳು ಅಗತ್ಯವಿರುವ ಹೊಂದಾಣಿಕೆಯನ್ನು ಮಾಡಿಕೊಂಡು ಶಿಫಾರಸ್ಸುಗಳನ್ನು ಮಾಡುವಾಗ ಆದಾಯ ದೂರವ್ಯಾಪ್ತಿಯನ್ನು ಪರಿಗಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.