ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಯ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಹೀಗೆ ಇನ್ಮುಂದೆ ನೇಮಕಾತಿ ಮಾಡಿಕೊಳ್ಳೋದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಅದರಂತೆ ಈಗ ವಿಎ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯ ಸರ್ಕಾರದಿಂದ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವಿಶೇಷ ರಾಜ್ಯಪತ್ರವನ್ನು ಹೊರಡಿಸಿದ್ದಾರೆ. ಅವರು ಹೊರಡಿಸಿರುವಂತ ವಿಶೇಷ ರಾಜ್ಯಪತ್ರದಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978ರ (1990ರ ಕರ್ನಾಟಕ ಅಧಿನಿಯಮ 14)ರ (ಕರ್ನಾಟಕ ಅಧಿನಿಯಮ 14) ಕಲಮು 3ರ ಉಪ-ಕಲಮು (1)ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸಲು ಕರ್ನಾಟಕ ಸರ್ಕಾರವು ಉದ್ದೇಶಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳ (ಕಂದಾಯ ಅಧೀನ ಶಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು, 1977ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಅದರಂತೆ ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದ್ದಾರೆ.

ಈವರೆಗೆ ವಿಎ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ಕಟ್ ಆಫ್ ಲೀಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ವಿಧಾನವನ್ನು ನಿಯಮಕ್ಕೆ ತಿದ್ದುಪಡಿ ತಂದು ಬದಲಾವಣೆ ಮಾಡಲಾಗುತ್ತಿದೆ. ಇನ್ಮುಂದೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ ಇಲ್ಲವೇ ರಾಜ್ಯ, ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅದರಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳೋದಕ್ಕೆ ನಿರ್ಧರಿಸಲಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವಂತ ವಿಎ ನೇಮಕಾತಿ ತಿದ್ದುಪಡಿ ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ, ಸಲಹೆಗಳನ್ನು ಕಳುಪಿಸಬಹುದಾಗಿದೆ. ಅವುಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-560 001 ಗೆ ಕಳುಹಿಸುವಂತೆ ತಿಳಿಸಿದ್ದಾರೆ.