ಜನರ ಒಳಿತಿನ ಸರ್ವಸ್ಪರ್ಶಿ ಬಜೆಟ್: ಸಚಿವ ಈಶ್ವರ ಖಂಡ್ರೆ
ಬೆಂಗಳೂರು, ಜು.7: ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರಿಂದು ಮಂಡಿಸಿರುವ 2023-24ನೇ ಸಾಲಿನ ಆಯವ್ಯಯ ಬಡವರು, ಮಧ್ಯಮ ವರ್ಗದ ಜನರ ಅವಶ್ಯಕತೆಗೆ ಪೂರಕವಾದ ಹಾಗೂ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್ ಆಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 14ನೇ ಬಾರಿಗೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು, ಎಲ್ಲ ಗ್ಯಾರಂಟಿಗಳ ಅನುಷ್ಠಾನದ ಸ್ಪಷ್ಟ ಮುನ್ನೋಟದೊಂದಿಗೆ, ಜನರಿಗೆ ಹೊರೆಯಾಗದಂತಹ ಬಜೆಟ್ ಮಂಡಿಸಿದ್ದಾರೆ. ಜೊತೆಗೆ ಕೃಷಿ, ಉದ್ಯೋಗ ಸೃಷ್ಟಿ, ಬಂಡವಾಳ ಆಕರ್ಷಣೆಗೆ ಒತ್ತು ನೀಡಿದ್ದಾರೆ ಇದೊಂದು ದೂರದರ್ಶಿತ್ವದ ಬಜೆಟ್ ಎಂದು ಬಣ್ಣಿಸಿದ್ದಾರೆ.
ರೈತರ, ಕಾರ್ಮಿಕರ ಹಿತಕಾಯುವ ಈ ಬಜೆಟ್, ಮಹಿಳೆಯರ ಮತ್ತು ದುರ್ಬಲರ ಸಬಲೀಕರಣಕ್ಕೂ ಸಾಕಷ್ಟು ಆದ್ಯತೆ ನೀಡಿದೆ. ಸಾಮಾಜಿಕ ನ್ಯಾಯವನ್ನೂ ಎತ್ತಿಹಿಡಿದಿದೆ ಎಂದು ತಿಳಿಸಿದ್ದಾರೆ.
ಅನುಭವದ ಧಾರೆ: ಮುಖ್ಯಮಂತ್ರಿಯವರು ತಮ್ಮ ಸುದೀರ್ಘ ಅನುಭವವನ್ನು ಈ ಬಜೆಟ್ ನಲ್ಲಿ ಧಾರೆ ಎರೆದಿದ್ದು, ಕಲ್ಯಾಣ ರಾಜ್ಯದ ಕನಸು ನನಸು ಮಾಡುವ ಸಂಯಕ್ ನೋಟವನ್ನು ಮುಂದಿಟ್ಟಿದ್ದಾರೆ. ಹಿಂದಿನ ಸರ್ಕಾರ ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿತ್ತು. ಅದನ್ನು ಸರಿದಾರಿಗೆ ತರುವ ಮತ್ತು 1 ಟ್ರಿಲಿಯನ್ ಆರ್ಥಕ ರಾಜ್ಯ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಭದ್ರತೆಯ ಖಾತರಿ ನೀಡದ ಯೋಜನೆ ವ್ಯರ್ಥ. ಅಭಿವೃದ್ಧಿಯ ಫಲ ಕಟ್ಟಕಡೆಯ ಮನುಷ್ಯನಿಗೂ ದೊರಕಬೇಕು ಇದು ಈ ಬಜೆಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ರೈತರ ಹಿತ, ಜನರ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಲಾಗಿದೆ.
ಆನೆ ಹಾವಳಿಗೆ 120 ಕೋಟಿ : ಕಾಡಾನೆಗಳು ನಾಡಿಗೆ ಬಂದು ಉಪಟಳ ನೀಡುವುದನ್ನು ತಪ್ಪಿಸಲು 520 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಯೋಜನೆಯ ಪೈಕಿ 312 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗೆ ಈ ಬಜೆಟ್ ನಲ್ಲಿ 120 ಕೋಟಿ ರೂ. ಒದಗಿಸಲಾಗಿದೆ. 2 ಹೊಸ ಆನೆ ಕಾರ್ಯಪಡೆ ರಚನೆ ನಿರ್ಧಾರವನ್ನು ಅರಣ್ಯ ಸಚಿವನಾಗಿ ಸ್ವಾಗತಿಸುತ್ತೇನೆ. ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಸಿರೀಕರಣ: ಹಸಿರು ವ್ಯಾಪ್ತಿ ಶೇ.33ಕ್ಕೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದ್ದು, 500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗೆ ಆದ್ಯತೆ ನೀಡಲಾಗಿದೆ. ಮಹಾತ್ಮಾಗಾಂಧೀ ನರೇಗಾ ಯೋಜನೆಯ ಸಮನ್ವಯದೊಂದಿಗೆ ಇದನ್ನು ಮುಂದಿನ 5 ವರ್ಷದಲ್ಲಿ ಕಾರ್ಯಗತ ಮಾಡುವ ನಿರ್ಣಯ ರಾಜ್ಯದ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ. ಇಂಗಾಲದ ಹೆಜ್ಜೆಗುರುತು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳಲ್ಲಿ ಪರಿಸರ ನಿರ್ವಹಣೆ ಮೌಲ್ಯಮಾಪನ ಮಾಡುವ ನಿರ್ಧಾರವೂ ಮಹತ್ವಪೂರ್ಣವಾಗಿದೆ.
ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವಿರುವ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ಸಸ್ಯ ಶ್ಯಾಮಲ ಕಾರ್ಯಕ್ರಮ ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಳ ಕ್ರಾಂತಿಗೆ ಪೂರಕವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಾಜ್ಯಕ್ಕೆ ಅನ್ಯಾಯ: ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಹಂಚಿಕೆ ಅತ್ಯಲ್ಪವಾಗಿದೆ. 15ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಭಾರೀ ನಷ್ಟವಾಗಿದೆ. ಆದಾಗ್ಯೂ ಅನಗತ್ಯ ವೆಚ್ಚ ತಗ್ಗಿಸಿ, ರಾಜ್ಯದ ಹಿತ ಕಾಯಲು ಬಜೆಟ್ ಸಫಲವಾಗಿದೆ.
ಏಳು ಕೋಟಿ ಕನ್ನಡಿಗರ ಹಿತ ಕಾಯುವ ಈ ಬಜೆಟ್, ಜಲಸಂಪನ್ಮೂಲ ಇಲಾಖೆಗೂ ಒತ್ತು ನೀಡಿದೆ. ಮಂದಗತಿಯಲ್ಲಿ ಸಾಗಿರುವ ಯೋಜನೆ ಪೂರ್ಣಗೊಳಿಸಲು ಒತ್ತು ನೀಡಲಾಗಿದೆ. ಮಕ್ಕಳಲ್ಲಿ ಕಲಿಕಾ ನ್ಯೂನತೆ ನಿವಾರಿಸಲು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ಬಲವರ್ಧನೆಗಾಗಿ ಮರು ಸಿಂಚನ ಯೋಜನೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೂ ಅತ್ಯಂತ ಉಪಯುಕ್ತವಾಗಿದೆ.
ತ್ಯಾಜ್ಯ ವಿಲೆ – ಸ್ವಾಗತ: ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸರ್ಕಾರ ಆದ್ಯತೆ ನೀಡಿದ್ದು, 97 ಲಕ್ಷ ಟನ್ ಹಳೆ ತ್ಯಾಜ್ಯವನ್ನು ಜೈವಿಕ ಗಣಿಗಾರಿಕೆ ಮೂಲಕ ಸಂಸ್ಕರಿಸುವ ನಿರ್ಧಾರವನ್ನು ಪರಿಸರ ಸಚಿವರಾಗಿ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಇದು ಜನಪರ ಬಜೆಟ್ ಆಗಿದ್ದು, ರಾಜ್ಯದ ಎಲ್ಲ ವರ್ಗದ, ಎಲ್ಲ ಭಾಗದ ಹಿತ ಕಾಯುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಬಜೆಟ್ ಕೊಡುಗೆ: ಈಶ್ವರ ಖಂಡ್ರೆ ಧನ್ಯವಾದ
ಬೆಂಗಳೂರು, ಜು.7: ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಪ್ರಕಟಿಸಿರುವುದು ಈ ಭಾಗದ ಜನರಲ್ಲಿ ಅಭಿವೃದ್ಧಿಯ ಭರವಸೆ ಮೂಡಿಸಿದೆ ಎಂದು ತಿಳಿಸಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ನಿರ್ಧಾರ ಅಸಮತೋಲನ ನಿವಾರಣೆಗೆ ಪೂರಕವಾಗಿದೆ, ಈ ಹಿಂದೆ ಮಂಜೂರಾದ ಹಣವೂ ಖರ್ಚಾಗದೆ ಹಾಗೇ ಉಳಿಯುತ್ತಿತ್ತು, ಈಗ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದು ಬಜೆಟ್ ನಲ್ಲೇ ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ ನಿಂದ ಸಿಂಧನೂರು ಬಳಿಯ ಬಳ್ಳಾರಿ –ಲಿಂಗಸುಗೂರು ರಸ್ತೆ ವೃತ್ತದವರೆಗೆ ಒಟ್ಟು 78 ಕಿ.ಮೀ. ಉದ್ದದ ರಸ್ತೆಯನ್ನು 1,696 ಕೋಟಿ ರೂ.ವೆಚ್ಚದಲ್ಲಿ ಹೈಬ್ರೀಡ್ ಆನ್ಯುಟಿ ಮಾದರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿರುವುದು ಈ ಭಾಗದ ಸಂಪರ್ಕಾಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ತರಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಒತ್ತು: ಬೀದರ್ ನಲ್ಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶ ನಿರ್ಮಾಣ. ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳಾದ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ, ಮತ್ತು ಮಳಕೇಡ, ಬೀದರ್, ರಾಯಚೂರು, ಕಲ್ಬುರ್ಗಿ, ಕೋಟೆಗಳ ಸಮಗ್ರ ಅಭಿವೃದ್ಧಿಗೆ 75 ಕೋಟಿ ರೂ. ಒದಗಿಸಲಾಗಿದ್ದು, ಇದರಿಂದ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಅನುವಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯ ವಿಠ್ಠಲ ದೇವಾಲಯ, ಬೀದರ್ ಕೋಟೆಯಲ್ಲಿ ರಾತ್ರಿಯ ವೇಳೆ 3 ಡಿ ಪ್ರೊಜೆಕ್ಷನ್ ಮಲ್ಟಿ ಮೀಡಿಯಾ ಧ್ವನಿ ಬೆಳಕಿನ ಪ್ರದರ್ಶನ ಯೋಜನೆಯೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣ ಮಾಡುವುದು ಕೂಡ ಈ ಭಾಗದ ನೈರ್ಮಲ್ಯ ಕಾಪಾಡುವಲ್ಲಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.