ಬೆಂಗಳೂರು : ಕರ್ನಾಟಕ ಗೃಹ ಮಂಡಳಿ ಯೋಜನೆ ಗಳಲ್ಲಿ ಜಮೀನು ವ್ಯಾಜ್ಯ ಬಗೆಹರಿಸಿ ಕಾಮಗಾರಿ ತ್ವರಿತ ಗೊಳಿಸಲು ಲೋಕ್ ಅದಾಲತ್ ಮಾದರಿಯಲ್ಲಿ ಜಮೀನು ಮಾಲೀಕರ ಜತೆ ಸಮಾಲೋಚನೆ ಅದಾಲತ್ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿಯಲ್ಲಿ ಇಂದು, ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಸೂರ್ಯ ನಗರ ಯೋಜನೆ ಸೇರಿದಂತೆ ಗೃಹಮಂಡಳಿಯ ಹತ್ತು ಯೋಜನೆಗಳಿಗೆ  4615 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಈ ಪೈಕಿ ಸೂರ್ಯ ನಗರ ನಾಲ್ಕನೇ ಹಂತದ 700 ಎಕರೆ ಸೇರಿದಂತೆ ಒಟ್ಟು ಒಂದು ಸಾವಿರ ಎಕರೆ ಗೆ ಸಂಬಂಧಿ ಸಿದ ವ್ಯಾಜ್ಯ ದಿಂದ ಹತ್ತೂ ಯೋಜನೆಗಳಿಗೆ ಗ್ರಹಣ ಹಿಡಿದಂತಾಗಿದೆ . ಹೀಗಾಗಿ ರೈತರು ಹಾಗೂ ಜಮೀನು ಮಾಲೀಕರ ಜತೆ ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸಿ ಯೋಜನೆಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಮೀನು ಸ್ವಾಧೀನ ಸೇರಿ ನ್ಯಾಯಾಲಯಗಳಲ್ಲಿ ಇರುವ ಪ್ರಕರಣ ವರ್ಷಗಟ್ಟಲೆ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಎಲ್ಲಿ ಲೋಪ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಕಾನೂನು ವಿಭಾಗದ ಜತೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಬಲ್ಕ್ ಅಲಾಟ್ ಮೆಂಟ್

ರಾಜ್ಯದ ಹಲವೆಡೆ ಗೃಹ ಮಂಡಳಿ ವತಿಯಿಂದ ರಚಿಸಿರುವ ಬಡಾವಣೆಗಳಲ್ಲಿ ಮನೆ ಹಾಗೂ ನಿವೇಶನಗಳಿಗೆ ಬೇಡಿಕೆ ಇಲ್ಲದಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಆಗಿದ್ದು ಆ ರೀತಿಯ ಎಲ್ಲ ಬಡಾವಣೆಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ಜನತಾ ದರ್ಶನ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ವಾಗಿ ಇರುವ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಮೂಲ ಸೌಕರ್ಯ ಕೊರತೆ ಮತ್ತಿತರ ಸಮಸ್ಯೆ ಇದ್ದರೆ ಬಗೆಹರಿಸಿ ಅಗತ್ಯ ವಾದರೆ ಕೆಲವು ರಿಯಾಯಿತಿ ಸಹ ನೀಡಿ ಗೃಹ ಮಂಡಳಿ ನಿವೇಶನ, ಮನೆಗಳಿಗೆ ಬೇಡಿಕೆ ಬರುವಂತೆ ಮಾಡಲಾಗುವುದು. ಸರ್ಕಾರಿ ನೌಕರರ ಸಂಘ ಸೇರಿದಂತೆ ಸಂಘ ಸಂಸ್ಥೆಗಳಿಗೆ ಸಗಟು ಹಂಚಿಕೆ (ಬಲ್ಕ್ ಅಲಾಟ್ ಮೆಂಟ್ )ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಗೃಹ ಮಂಡಳಿ ರಚಿಸಿರುವ ಬಡಾವಣೆಗಳಲ್ಲಿ  ನಿವೇಶನಗಳ ಮತ್ತು ಮನೆಗಳ ಹಂಚಿಕೆ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿ ಇರುವ ಬಗ್ಗೆ ದೂರು ಗಳು ಇದ್ದು ಆ ಬಗ್ಗೆ ಗಮನ ಹಸರಿಸಲು ಸೂಚಿಸಲಾಗಿದೆ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ಮಾಡುವಂತೆ ತಿಳಿಸಲಾಗಿದೆ. ಗೃಹ ಮಂಡಳಿಯ ಯೋಜನೆ ಗಳ ಅನುಷ್ಠಾನ ದಲ್ಲಿ ವಿಳಂಬ ಆಗುವುದು ತಪ್ಪಿಸಲು ಕಾಲಮಿತಿ ಹಾಕಿಕೊಂಡು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಚಿವರು ಗೃಹಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಯ ಡಿ ಹಾಲಿ ಅನುಷ್ಠಾನ ದಲ್ಲಿರುವ  ಯೋಜನೆ, ಮುಂದಿನ ಹೊಸ ಯೋಜನೆ ಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಇರುವ ಅನುದಾನದ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು.

ಕೇಂದ್ರದಿಂದ ಬರಬೇಕಿರುವ  ಅನುದಾನ ದ ಮಾಹಿತಿ ನೀಡಿ, ಸದ್ಯದಲ್ಲೇ ದೆಹಲಿಗೆ ತೆರಳಿ ಸಂಬಂಧ ಪಟ್ಟ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ವಸತಿ ಇಲಾಖೆ ಕಾರ್ಯದರ್ಶಿ ರವಿಶಂಕರ್,ಗೃಹಮಂಡಳಿ ಆಯುಕ್ತರರಾದ ಕವಿತಾ ಮನ್ನಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ಶಿವಶಂಕರ್, ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.