ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ 'ನಮ್ಮಭಿಮಾನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಆಯೋಜನೆ
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ 'ನಮ್ಮಭಿಮಾ ನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಷ್ಟ ಹೇಳಿಕೊಂಡು ಕಚೇರಿಗಳಿಗೆ ಬರುವ ಜನರಿಗೆ ಮಾನವೀಯತೆಯಿಂದ ಸ್ಪಂದಿಸಿ, ಕಾನೂನು ಚೌಕಟ್ಟಿನಲ್ಲಿ ಪರಿಹಾರ ಹುಡುಕಿಕೊಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ನಮ್ಮಭಿಮಾ ನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯ ಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
"ಜನರು ತಮಗೆ ಬೇಕಾಗಿರುವುದನ್ನು ದೇವರ ಬಳಿ ಕೇಳಿಕೊಳ್ಳಲು ದೇವಾಲಯಗಳಿಗೆ ಹೋಗುತ್ತಾರೆ. ಅದೇ ರೀತಿ ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಲು ಸರಕಾರಿ ನೌಕರರು, ಶಾಸಕರು, ಸಚಿವರ ಬಳಿ ಬರುತ್ತಾರೆ. ಆಗ ನಾವು ಶ್ರದ್ದೆಯಿಂದ ಅವರ ಸೇವೆ ಮಾಡಬೇಕು,'' ಎಂದು ಹೇಳಿದರು.
"ನಾನು ಅಧಿಕಾರ ಸ್ವೀಕರಿಸಿದ ಕೂಡಲೇ ಜನರ ಮನೆ ಬಾಗಿಲಿಗೆ ಸರಕಾರ ಕೊಂಡೊಯ್ಯಲು ಪ್ರಜಾಸೇವೆ ಇಲಾಖೆ ರಚಿಸಿದ್ದೇನೆ. ಇದಕ್ಕೆ ಉತ್ತಮ ಅಧಿಕಾರಿಗಳ ತಂಡವನ್ನೂ ನಿಯೋಜಿಸಲಾಗಿದೆ. ಸಂಘ-ಸಂಸ್ಥೆಗಳು, ಜನರ ಬೇಡಿಕೆ ಗಳನ್ನು ಈಡೇರಿಸಲು, ಕಾನೂನು ಚೌಕಟ್ಟಿನಲ್ಲಿ ಹೇಗೆ ಬಗೆಹರಿಸ ಬಹುದು, ಆರ್ಥಿಕ ಪರಿಸ್ಥಿತಿ ಏನು ಎಂದು ಪರಿಶೀಲನೆ ಮಾಡಿ ಈ ಇಲಾಖೆ ಪರಿಹಾರ ಹುಡುಕಲಿದೆ. ಸಚಿವರು ಮೊದಲ ಹಾಗೂ ಮೂರನೇ ಶನಿವಾರ ಒಂದೊಂದು ತಾಲೂಕು ಕಚೇರಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಲಿದ್ದಾರೆ. ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಹಂತದಲ್ಲೂ ಸಮಸ್ಯೆ ಕೇಳಿ ಬಗೆಹರಿಸಬೇಕು,'' ಎಂದು ಸಲಹೆ ನೀಡಿದರು.
"ಜನರ ಸಮಸ್ಯೆ ಬಗೆಹರಿಸಲು ಮಾರ್ಗ ಹುಡುಕಬೇಕೇ ಹೊರತು, ಕೊಂಕು ಹುಡುಕಿ ಅವರು ಅಲೆದಾಡುವಂತೆ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವುಗಳು ಆಧಾರಸ್ತಂಭ, ನೀವು, ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡಬೇಕು,'' ಎಂದು ಕರೆ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 'ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಗೊಂಡಿವೆ. ದೇಶಕ್ಕೆ ಮಾದರಿಯಾದ ಈ ಯೋಜನೆ ಯಶಸ್ಸಿಗೆ ಕಾರಣ ಸರಕಾರಿ ನೌಕರರು, ಕೋವಿಡ್ ಸಂದರ್ಭದಲ್ಲಿ ಸಂಬಳ ಭತ್ಯೆ ನೀಡಿ, ಜನರ ನೆರವಿಗೆ ಧಾವಿಸುವ ಮೂಲಕ ಮಾನವತ್ತ ಮೆರೆದಿದ್ದಾರೆ,'' ಎಂದು ಶ್ಲಾಘಿಸಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಪಡಕ್ಷರಿ, ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಇದ್ದರು.
''ಪಕ್ಷದ ಪ್ರಣಾಳಿಕೆಯಲ್ಲಿ ವರ್ಷದಲ್ಲಿ 2.50 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡಲಾಗಿದೆ. ಒಳಮೀಸಲು ಗೊಂದಲದಿಂದ ನೇಮಕಾತಿ ಪ್ರಕ್ರಿಯೆಗೆ ಕೊಂಚ ತಡವಾಗಿದೆ. ಈಗಾಗಲೇ ಮುಖ್ಯಮಂತ್ರಿ ಆಯಾ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ 'ಒಪಿಎಸ್' ಮರು ಜಾರಿ ಆಗಲಿದೆ. ನಿಮಗೆ ನಿರಾಶೆ ಮಾಡುವುದಿಲ್ಲ. ನೀವು ಸರಕಾರದ ಮೇಲೆ ವಿಶ್ವಾಸವಿಡಬೇಕು," ಎಂದರು.
ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ. ಜಿ.ಪರಮೇಶ್ವರ್ ಅವರಿಗೆ ಅಭಿನಂದಿಸಲಾಯಿತು. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಮೈಸೂರು, ಹಾಸನ ಸೇರಿದಂತೆ ಹಳೆ ಮೈಸೂರು ಭಾಗದ 10 ಜಿಲ್ಲೆಗಳ ಸರಕಾರಿ ನೌಕರರ ಸುಮಾರು 4 ಸಾವಿರ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಪಡಕ್ಷರಿ, ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಉಪಸ್ಥಿತರಿದ್ದರು.