ಜನವರಿ 16, 2025

  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ.), ಮೈಸೂರು' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರು ನಡೆಸಿದ ಸಮಾಜೋ-ಧಾರ್ಮಿಕ ಚಳುವಳಿ ಅಪೂರ್ವವಾದುದು. ಅನನ್ಯವಾದುದು. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಶರಣರ ವಿಚಾರಧಾರೆ, ಸಾಮಾಜಿಕ ಸಮಾನತೆಯ ಆಂದೋಲನ ಮತ್ತು ಅವರ ತತ್ತ್ವ ಸಿದ್ಧಾಂತಗಳ ಚಿಂತನದ ಫಲವಾಗಿ ಮೂಡಿಬಂದ ವಚನ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ. ಅದು ಕನ್ನಡದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಈ ಸಂಪತ್ತಿನ ಸಂದೇಶವನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವ ಮಹಾ ಮಣಿಹವನ್ನು ಶ್ರೀಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ 1986ರಲ್ಲಿ ಸ್ಥಾಪಿತವಾದ 'ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು' ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದೆ. ಪರಿಷತ್ತು ಕಳೆದ 38 ವರ್ಷಗಳಿಂದ ನಿರಂತರವಾಗಿ ಶರಣ ಸಾಹಿತ್ಯ ಸಂಸ್ಕೃತಿಗಳ ಪ್ರಸಾರದಲ್ಲಿ ತೊಡಗಿಕೊಂಡಿದೆ.

    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇದುವರೆಗೂ ರಾಷ್ಟ್ರಮಟ್ಟದ 12 ಸಮ್ಮೇಳನಗಳನ್ನು ನಡೆಸಿದೆ. ಈಗ 13ನೇ ಸಮ್ಮೇಳನವನ್ನು ಐತಿಹಾಸಿಕ ಚಿತ್ರದುರ್ಗ ನಗರದ ಪ್ರತಿಷ್ಠಿತ ಮುರುಘಾಮಠದ ಅನುಭವ ಮಂಟಪದ ವೇದಿಕೆಯಲ್ಲಿ 2025ರ ಜನವರಿ 18 ಹಾಗೂ 19 ಈ ಎರಡು ದಿನಗಳ ಕಾಲ ನಡೆಸುತ್ತಿರುವುದು ಈ ಭಾಗದ ಜನರ ಹೆಮ್ಮೆಯಾಗಿದೆ.

    ಜನವರಿ 18 ಮತ್ತು 19ರಂದು ಚಿತ್ರದುರ್ಗದ ಶ್ರೀ ಮುರಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಅಖಿಲ ಭಾರತ 13ನೆಯ ಶರಣ ಸಾಹಿತ್ಯ ಸಮ್ಮೇಳನವನ್ನು ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 18.1.20250 ಉದ್ಘಾಟಿಸಲಿದ್ದಾರೆ. ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಮತ್ತು ಗದಗಿನ ಜಗದ್ಗರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ 'ಅನುಭಾವ ಸಂಗಮ' ಶೀರ್ಷಿಕೆಯ ವಿಶೇಷ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ್‌ರವರು ಬಿಡುಗಡೆ ಮಾಡಲಿದ್ದಾರೆ.