December 19, 2023

ಬೆಂಗಳೂರು:

ಕೈಗೆಟುವ ದರದಲ್ಲಿ ಸೂರು ; ನೂತನ ತಂತ್ರಜ್ಞಾನ ಅಳವಡಿಕೆಗೆ ರಾಷ್ಟ್ರೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮಂಡಳಿ - ನರೆಡ್ಕೋ ಕರೆ

 - ರಿಯಲ್‌ ಎಸ್ಟೇಟ್‌ ಉದ್ಯಮ ಮುನ್ನಡೆಸಲು ಚತುರ ತಂತ್ರಜ್ಞಾನ 2047 ರ ದೃಷ್ಟಿಕೋನ ಅನಾವರಣಗೊಳಿಸಿದ ನರೆಡ್ಕೋ

ಕೈಗೆಟುವ ದರದಲ್ಲಿ ನಿರ್ಮಾಣ ಮನೆಗಳನ್ನು ನಿರ್ಮಿಸುವ ಕುರಿತಂತೆ ರಿಯಲ್‌ ಎಸ್ಟೇಟ್‌ ವಲಯದ ಪರಮೋಚ್ಛ ಸಂಸ್ಥೆ ರಾಷ್ಟ್ರೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮಂಡಳಿ – ನರೆಡ್ಕೋ ನಗರದಲ್ಲಿ ರಿಯಲ್‌ ಎಸ್ಟೇಟ್‌ ಶೃಂಗ ಸಭೆ ನಡೆಸಿತು. ರಿಯಲ್‌ ಎಸ್ಟೇಟ್‌ ವಲಯದ ಪ್ರಮುಖರು, ಹಣಕಾಸು ಸಲಹೆಗಾರರು, ವಿಷಯ ತಜ್ಞರು ಸುಲಭ ದರದಲ್ಲಿ ಮನೆಗಳನ್ನು ನಿರ್ಮಿಸುವ ಕುರಿತು ಇಡೀ ದಿನ ಸಮಾಲೋಚನೆ ನಡೆಸಿದರು.  

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ಪ್ರತಿಯೊಬ್ಬರಿಗೂ ಸೂರು ಭರವಸೆ ಈಡೇರಿಸುವ ಮಾರ್ಗೋಪಾಯಗಳು ಮತ್ತು ವಿಧಾನಗಳ ಕುರಿತು ಚರ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ರಿಯಲ್ ಎಸ್ಟೇಟ್ ವಲಯವನ್ನು ಸುಗಮಗೊಳಿಸುವಲ್ಲಿ ನಿರ್ಮಾಣ ವಲಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧ ಎಂದು ಘೋಷಿಸಿದೆ.

ನರೆಡ್ಕೋ ರಾಷ್ಟ್ರೀಯ ಅಧ್ಯಕ್ಷ ಡಾ. ನಿರಂಜನ್‌ ಹಿರಾನಂದಾನಿ, ನರೆಡ್ಕೋದ ಕರ್ನಾಟಕ ವಿಭಾಗದ ಉಪಾಧ್ಯಕ್ಷ ಮನೋಜ್‌ ಎಂ ಲೋಧ, ಎಕ್ಸ್‌ ಆಲ್‌ ಇಂಡಿಯಾ ಲೀಡಿಂಗ್‌ ಪಾಪ್‌ ಟೆಕ್‌ ನ ಸಂಸ್ಥಾಪಕರು ಮತ್ತು ಸಿಇಒ ಸುರೇಶ್‌ ರಂಗರಾಜನ್‌, ಬೆಂಗಳೂರು ಐಐಎಂ ನ ರಿಯಲ್‌ ಎಸ್ಟೇಟ್‌ ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟೇಶ್‌ ಪಂಚಪಗೇಸನ್‌, ಸ್ಕೋರ್‌ ಮಿ ಪ್ರವೈಟ್‌ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಪ್ರಕಾಶ್‌ ಗಾಡಿಯಾ, ವ್ಯಾಲ್ಯು ಅಂಡ್‌ ರಿಸ್ಕ್‌ ಅಡ್ವೈಸರಿ ಕಾರ್ಯತಂತ್ರ ಸಮಾಲೋಚನೆ ವಿಭಾಗದ ಮುಖ್ಯಸ್ಥ ಜೆರಿ ಕಿಂಗ್ಸ್ಲೆ ಮತ್ತಿತರರು ಉಪಸ್ಥಿತರಿದ್ದರು.

ನರೆಡ್ಕೋದ ಗೌರವ ಕಾರ್ಯದರ್ಶಿ ಆರ್.ಆರ್.‌ ರಮೇಶ್ವರ್‌ ಮಾತನಾಡಿ, ಮನೆಗಳ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನ ವಲಯದಲ್ಲಿ ದೇಶ ಅಷ್ಟೊಂದು ಮುಂದುವರೆದಿಲ್ಲ. ಹೊಸ ವಿಧಾನಗಳ ಅಳವಡಿಸಿಕೊಳ್ಳುವ ಅಗತ್ಯವಿದೆ. ನಿರ್ಮಾಣ ಚಟುವಟಿಕೆಯಲ್ಲಿ ವೆಚ್ಚ ಕಡಿತ ಮಾಡುವ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನೀತಿ, ನಿರೂಪಕರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದರು.   

ಬೆಂಗಳೂರು ಐಐಎಂ ನ ರಿಯಲ್‌ ಎಸ್ಟೇಟ್‌ ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟೇಶ್‌ ಪಂಚಪಗೇಸನ್‌* ಮಾತನಾಡಿ, ಅಸಂಘಟಿತ ವಲಯದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮವನ್ನು ಸುಗಮಗೊಳೀಸುವ ಮತ್ತು ಕಾರ್ಪೊರೇಟ್ ವಲಯವನ್ನಾಗಿ ರೂಪಿಸುವ ನಿಟ್ಟಿಲ್ಲಿ ಈ ಕ್ಷೇತ್ರವನ್ನು ಬಲವರ್ಧನೆಗೊಳಿಸುವುದೊಂದೇ ಸೂಕ್ತ ವಿಧಾನ ಎಂದು ಹೇಳಿದರು.

ನರೆಡ್ಕೋದ ಕರ್ನಾಟಕ ವಿಭಾಗದ ಉಪಾಧ್ಯಕ್ಷ ಮನೋಜ್‌ ಎಂ ಲೋಧ ಮಾತನಾಡಿ, ರಿಯಲ್‌ ಎಸ್ಟೇಟ್‌ ವಲಯಕ್ಕೆ ವಿದೇಶಿ ನೇರ ಬಂಡವಾಳ ಮತ್ತಿತರೆ ಮಾರ್ಗಗಳ ಮೂಲಕ ಲಭ್ಯವಿರುವ ಹಣಕಾಸು ಮಾರ್ಗಗಳ ಕುರಿತು ಬೆಳಕು ಚೆಲ್ಲಿದರು.

ನರೆಡ್ಕೋ ರಾಷ್ಟ್ರೀಯ ಅಧ್ಯಕ್ಷ ಡಾ. ನಿರಂಜನ್‌ ಹಿರಾನಂದಾನಿ ಮಾತನಾಡಿ, ವಸತಿ ವಲಯದಲ್ಲಿನ ಇತ್ತೀಚಿನ ವಿಧಾನಗಳು, ಬೆಳವಣಿಗೆ ಗಮನಾರ್ಹವಾಗಿದ್ದು, ಇದಕ್ಕೆ ಸೂಕ್ತ ಪ್ರೋತ್ಸಾಹ ಅಗತ್ಯ ಎಂದರು.

ನರೆಡ್ಕೋ ಕರ್ನಾಟಕ ವಿಭಾಗದ ಅಧ್ಯಕ್ಷ ಶ್ಯಾಂ ರೆಡ್ಡಿ ಮಾತನಾಡಿ, ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಕುರಿತು ಗಮನಹರಿಸಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ದಿಸೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಗಮನಹರಿಸಬೇಕು ಎಂದು ಹೇಳಿದರು.