ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಬಿಜೆಪಿ ಸರ್ಕಾರ ದಲ್ಲಿ ಅನುದಾನ ಸಿಗದೆ ಕಾಮಗಾರಿ ಪೂರ್ಣಗೊಳ್ಳದ 

ಶಾದಿ ಮಹಲ್-ಸಮುದಾಯ ಭವನ ಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ನೆರವು ಒದಗಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಸಭೆಯಲ್ಲಿ ಕಾಂಗ್ರೆಸ್ ನ ಸುಬ್ಬಾರೆಡ್ಡಿ ಪ್ರೆಶ್ನೆಗೆ ಉತ್ತರಿಸಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಜಾಮೀಯಾ ಮಸೀದಿ ವತಿಯಿಂದ ನಿರ್ಮಾಣ ಮಾಡುತ್ತಿರುವ ಶಾದಿ ಮಹಲ್ ಕಟ್ಟಡಕ್ಕೆ 50 ಲಕ್ಷ ರೂ. ಸೇರಿದಂತೆ 126 ಪ್ರಸ್ತಾವನೆಗಳು ಇದ್ದು ಈ ವರ್ಷದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 54 ಕೋಟಿ ರೂ. ನೀಡಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜೆಡಿಎಸ್ ನ ಜಿ . ಟಿ ದೇವೇಗೌಡರ ಮತ್ತೊಂದು ಪ್ರೆಶ್ನೆ ಗೆ ಉತ್ತರಿಸಿದ ಸಚಿವರು, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ ಎಸ್ ಯು ಪಿ ಯೋಜನೆಯಡಿಯಲ್ಲಿ 3904 ಮನೆ ನಿರ್ಮಾಣ ಮಾಡಿರುವ 8 ವಸತಿ ಪ್ರದೇಶದಲ್ಲಿ ಹಣಕಾಸು ಲಭ್ಯತೆ ಆಧರಿಸಿ ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಸಂಪರ್ಕ ಸೇರಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಂಚ್ಯಾ ಸಾತಗಲ್ಲಿ, ಮಂಡಕಳ್ಳಿ, ರೂಪ ನಗರ, ಕುಪ್ಪಲೂರು, ರಾಜೀವ್ ನಗರ, ಏಕಲವ್ಯ ನಗರ, ಕೆಸರೆ ಸೇರಿ ಎಂಟು ಕಡೆ 3,904 ಮನೆ ನಿರ್ಮಿಸಿದ್ದು 12,752 ಜನರು ವಾಸ ಮಾಡುತ್ತಿದ್ದಾರೆ. ಕುಡಿಯುವ ನೀರು ಸೇರಿ ಮೂಲ ಸೌಕರ್ಯ ಕೊರತೆ ಇದೆ ಎಂದು ಜಿ. ಟಿ. ದೇವೇಗೌಡರು ತಿಳಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.