ಬೆಂಗಳೂರು : ಯಲಹಂಕ ವಲಯ ಕೆಂಪೇಗೌಡ ವಾರ್ಡ್ ವ್ಯಾಪ್ತಿಯಲ್ಲಿ ಇಂದು ರೈತರ ಸಂತೆಯಿಂದ ಜಕ್ಕೂರು ಮುಖ್ಯ ರಸ್ತೆಯವರೆಗೆ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯವನ್ನು ನಡೆಸಲಾಯಿತು.
ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ ರವರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್ ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವು ಮಾಡಲಾಗಿದೆ.
ಮುಂದುವರಿದು, ಪಾದಾಚರಿ ಮಾರ್ಗಗಳಲ್ಲಿದ್ದ ಬ್ಯಾನರ್‌ಗಳು, ಬಂಟಿಂಗ್ಸ್ ಗಳು, ಅಂಗಡಿ ಮುಂಭಾಗದಲ್ಲಿ ಬಿಟ್ಟಿರುವ ಶೀಟ್ ಗಳನ್ನು ತೆರವುಗೊಳಿಸಲಾಗಿದೆ. ಜೊತೆಗೆ ಪಾದಚಾರಿ ಮಾರ್ಗದಲ್ಲಿರುವ ಗಿಡ/ಮರಗಳ ರೆಂಬೆಗಳ ಕಟಾವು ಮಾಡಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜೆ.ಸಿ.ಬಿ, ಗ್ಯಾಂಗ್ ಮ್ಯಾನ್‌ಗಳನ್ನು ಬಳಸಿಕೊಂಡು ಸ್ವಚ್ಚತಾ ಕಾರ್ಯ ನಡೆಸಲಾಗಿದ್ದು, ಟ್ರ್ಯಾಕ್ಟರ್ ಹಾಗೂ ಕಾಂಪ್ಯಾಕ್ಟರ್ ನಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
ಮುಖ್ಯ ಆಯುಕ್ತರಿಂದ ಒತ್ತುವರಿ ತೆರವು ಸ್ಥಳಕ್ಕೆ ಭೇಟಿ ಹಾಗೂ ಪರಿಶೀಲನೆ:
ಪಾದಚಾರಿ ಮಾರ್ಗವನ್ನು ಒತ್ತವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರಿಗೆ ಇನ್ನು ಮುಂದೆ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಬೇಕು. ಅಲ್ಲದೆ ಇದೇ ರೀತಿ ಎಲ್ಲಾ ವಾರ್ಡ್ ಗಳಲ್ಲೂ ಪಾದಚಾರಿ ಮಾರ್ಗಗಳ ಒತ್ತುವರಿ ಸೇರಿದಂತೆ ಪಾದಚಾರಿ ಮಾರ್ಗಗಳಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ಜೊತೆಗೆ ಹಾಳಾಗಿರುವ ಸ್ಲ್ಯಾಬ್ ಗಳು ಹಾಗೂ ಕಿತ್ತು ಬಂದಿರುವ ಕರ್ಬ್ ಸ್ಟೋನ್ ಗಳನ್ನು ಕೂಡಲೆ ಸರಿಪಡಿಸಲು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು* ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಪೊಲೀಸ್ ಸಿಬ್ಬಂದಿ, ಪ್ರಹಾರಿ ವಾಹನ ಮತ್ತು ಸಿಬ್ಬಂದಿಗಳು, ಮಾರ್ಷಲ್‌ಗಳು, ಪೌರಕಾರ್ಮಿಕಾರು ಪಾಲ್ಗೊಂಡಿದ್ದರು.