ಕೊರಿಯಾದ ಬುಸಾನ್‍ನ ಗಿಜಾಂಗ್ ಜಿಮ್ನಾಷಿಯಂನಲ್ಲಿ ಕೊರಿಯಾ ಕರಾಟೆ ಡೋ ಫೆಡರೇಶನ್ ಮತ್ತು ಬುಸಾನ್ ಕರಾಟೆ ಡೋ ಫೆಡರೇಶನ್ ಸಹಯೋಗದಲ್ಲಿ ಜುಲೈ 1 ಮತ್ತು 2 ರಂದು ನಡೆದ ಕೊರಿಯಾ ಓಪನ್ ಇಂಟನ್ರ್ಯಾಷನಲ್ ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ರಾಜ್ಯದ 13 ಮಂದಿಯ ತಂಡ 7 ಚಿನ್ನ ಸೇರಿ 25 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದೆ. 6 ಬೆಳ್ಳಿ ಮತ್ತು 12 ಕಂಚಿನ ಪದಕಗಳನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ.
ಪದಕ ಗೆದ್ದ ಕರಾಟೆಪಟುಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಕೆಎಫ್‍ನ 8ನೇ ಡಾನ್ ಬ್ಲಾಕ್ ಬೆಲ್ಟ್‍ನ ಮುಖ್ಯ ಕಾರ್ಯದರ್ಶಿ ಪಿ.ಆರ್. ರಮೇಶ್, ರಾಜ್ಯದ ಕರಾಟೆ ಕ್ರೀಡೆಗೆ ಇದು ಅತ್ಯಂತ ಮಹತ್ವದ ಮತ್ತು ಮುಕುಟಪ್ರಾಯವಾದ ಸಾಧನೆ. ಇದರಿಂದ ಕರಾಟೆಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಕರಾಟೆಯಲ್ಲಿ ಮತ್ತಷ್ಟು ಸಾಧನೆಗೆ ಇದು ಪ್ರೇರಣೆಯಾಗಲಿದೆ ಎಂದರು.
ಹಿರಿಯ ಮಹಿಳಾ ವಿಭಾಗದಲ್ಲಿ ಫ್ರಾಂಕ್ ಅಂಟೋನಿ ಪಬ್ಲಿಕ್ ಶಾಲೆಯ ದಿವ್ಯ ಅರ್ಜುನ್ ಗುಪ್ತಾ ಎರಡು ಚಿನ್ನ ಮತ್ತು ತಂಡ ವಿಭಾಗದಲ್ಲಿ ಒಂದು ಬೆಳ್ಳಿ, ಕಿರಿಯರ ವಿಭಾಗದಲ್ಲಿ ಇದೇ ಶಾಲೆಯ ರೊನ್ಶಿ ಅರ್ಜುನ್ ಗುಪ್ತಾ ಬೆಳ್ಳಿ, ಬೆಥನಿ ಪ್ರೌಢ ಶಾಲೆಯ ನಿವೇದಿತ ಕೋದಂಡರಾಮ್ ಎರಡು ಬೆಳ್ಳಿ ಮತ್ತು ಒಂದು ಕಂಚು, ಮಹಿಳಾ ವಿಭಾಗದಲ್ಲಿ ದೊಡ್ಡ ನೆಕ್ಕುಂದಿಯ ವಿಬ್ಗಯಾರ್ ಶಾಲೆಯ ಗರ್ಗಿ ಸಂಗ್ಲಿಕರ್ ಎರಡು ಬೆಳ್ಳಿ, ಜಯನಗರದ ಜೈನ್ ಕಾಲೇಜಿನ ಅರ್ಜುನ್ ಪ್ರವೀನ್ ಮೆನನ್ ಪುರುಷರ ವಿಭಾಗದಲ್ಲಿ ಎರಡು ಕಂಚು, ಸೆಂಟ್ ಜೋಸೆಫ್ ಶಾಲೆಯ ರಯನ್ ಮನ್ಸೂರ್ ಅತಿ ಕಿರಿಯ ವಿಭಾಗದಲ್ಲಿ ಎರಡು ಕಂಚು, ನ್ಯೂ ಹಾರಿಜನ್ ಪಬ್ಲಿಕ್ ಶಾಲೆಯ ನಿಶಿತ್ ಎ ಜೈನ್ ಅತಿ ಕಿರಿಯರ ವಿಭಾಗರದಲ್ಲಿ ಎರಡು ಕಂಚು, ಕ್ರೈಸ್ಟ್ ಕಾಲೇಜಿನ ಸಮೀಕ್ಷಾ ಪಿ.ಎನ್. ಅವರು ಮಹಿಳೆಯರ ವಿಭಾಗದಲ್ಲಿ ತಲಾ ಒಂದೊಂದು ಬೆಳ್ಳಿ, ಕಂಚು, ವೈಟ್ ಫೀಲ್ಡ್ ಗ್ಲೋಬಲ್ ಶಾಲೆಯ ಅಮಿಝತೀನಿ ಗೋಪಣ್ಣ ಅವರು ಅತಿ ಕಿರಿಯ ವಿಭಾಗದಲ್ಲಿ ಕಂಚು, ಗೋಕುಲ್ ನ ನ್ಯೂ ಹಾರಿಜೋನ್ ಶಾಲೆಯ ಪ್ರಿಯಾನ್ಶಿ ಶರ್ಮಾ ಅವರು ಎರಡು ಬೆಳ್ಳಿ, ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಹಿರಿಯ ವಿಭಾಗದಲ್ಲಿ ರನ್ಶಿ ರಮೇಶ್ ಗಣೇಶ್ ಒಂದು ಚಿನ್ನ, ಒಂದು ಬೆಳ್ಳಿ, ರನ್ಶಿ ಸುಬ್ರಮಣಿ ಚಂದ್ರಶೇಖರ್ ಒಂದು ಕಂಚು, ರನ್ಶಿ ಇ.ಎನ್. ರಮ್ಯಾ ಒಂದು ಕಂಚು ಗೆದ್ದಿದ್ದಾರೆ. ಈ ಮಹತ್ವದ ಸಾಧೆನಯಿಂದ ಮತ್ತಷ್ಟು ಮಂದಿ ಕರಾಟೆಯತ್ತ ಒಲವು ತೋರಲು ಸಹಕಾರಿಯಾಗಲಿದ್ದು, ಭವಿಷ್ಯದಲ್ಲಿ ಈ ಕ್ರೀಡೆಗೆ ಹೊಸ ಆಯಾಮ ದೊರೆಯಲಿದೆ ಎಂದು ರಮೇಶ್ ಸಂತಸ ವ್ಯಕ್ತಪಡಿಸಿದರು.