ಸರ್ಜನ್‌ ಗಳು ಅಳತೆ ಮೀರಿದ ಸೇವೆ ಸಲ್ಲಿಸುತ್ತಿದ್ದು, ಆಧುನಿಕ ಬದುಕಿನ ಜೀವ ರಕ್ಷಕರಾಗಿದ್ದಾರೆ ಎಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಜಸ್ಟಿಸ್‌ ದಿನೇಶ್‌ ಕುಮಾರ್‌ ಹೇಳಿದ್ದಾರೆ.

ಶಸ್ತ್ರಚಿಕಿತ್ಸಕರ ದಿನ [ಸರ್ಜನ್ಸ್‌ ಡೇ]ದ ಅಂಗವಾಗಿ ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಹಾಗೂ ಸಹಯೋಗದಲ್ಲಿ ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸರ್ಜನ್‌ ಗಳಾದ ಪ್ರೊ.ಪಿ.ಎಸ್.‌ ಪಾರ್ಥಿಬನ್‌, ಪ್ರೊ.ಎನ್.‌ ನರಸಿಂಹನ್‌ ಅವರನ್ನು ಗೌರವಿಸಿ ಮಾತನಾಡಿದ ಅವರು, ಸರ್ಜನ್‌ ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್‌ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನುj ನಿರುಪಯುಕ್ತವಾಗಿದೆ ಎಂದರು. ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಅಧ್ಯಕ್ಷ ಡಾ. ಎಚ್.ವಿ. ಶಿವರಾಮ್‌,, ಖಜಾಂಚಿ ಡಾ. ರಾಜಶೇಖರ್‌ ಸಿ ಜಕ್ಕಾ, ಡಾ.ಕೆ.ಎಲ್.‌ ವೆಂಕಟೇಶ್‌, ಡಾ. ಮನೀಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.