*- ಬಸವನಗುಡಿ ನ್ಯಾಷನಲ್ ಕಾಲೇಜಿನ 9ನೇ ಘಟಿಕೋತ್ಸವದಲ್ಲಿ ಭಾಗಿ*
*- ತಮ್ಮ ವಿದ್ಯಾರ್ಥಿ ದಿನಗಳ ಮೆಲಕು*
*ಬೆಂಗಳೂರು ಜೂನ್ 10*: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆದುಕೊಳ್ಳುವಂತೆ ಅನುವು ಮಾಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣದಲ್ಲಿ ಉದ್ಯೋಗಾಧಾರಿತ ಪಠ್ಯಕ್ರಮಗಳ ಅಳವಡಿಕೆಯತ್ತ ಉನ್ನತ ಶಿಕ್ಷಣ ಇಲಾಖೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು *ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಹೇಳಿದರು*.
ಇಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 9 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು. ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ನ್ಯಾಷನಲ್ ಕಾಲೇಜು ನೀಡಿರುವ ಕೊಡುಗೆ ಬಹಳಷ್ಟು. ಡಾ.ಎಚ್.ಎನ್ ನರಸಿಂಹಯ್ಯ ಅವರ ನೇತೃತ್ವದಲ್ಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಬಹಳ ಸಂತಸದ ವಿಷಯ. ಕಾಲೇಜಿನ ವಿದ್ಯಾರ್ಥಿನಿಲಯದಲ್ಲೇ ವಾಸವಾಗಿದ್ದ ಅವರೊಂದಿಗಿನ ಒಡನಾಟ ಇಂದಿಗೂ ನನ್ನ ಕಣ್ಣಮುಂದಿದೆ. ಯಾವುದೇ ಪ್ರತಿಫಲಾಕ್ಷೇಪೆಯಿಲ್ಲದೇ ಒಂದು ಸಂಸ್ಥೆಯನ್ನು ಬೆಳಸಿದ ಹೆಗ್ಗಳಿಕೆ ಅವರದ್ದು. ವಿದ್ಯಾರ್ಥಿಯಾಗಿ ಕಾಲೇಜಿನ ಅವರಣದಲ್ಲಿ ನಾವು ಕೈಗೊಂಡ ಚಟುವಟಿಕೆಗಳು ಹಾಗೂ ಕಲಿಕೆ ನನ್ನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಮೆಲಕು ಹಾಕಿದರು.
*ಉದ್ಯೋಗಾಧಾರಿತ ಪಠ್ಯಕ್ರಮ:*
ಬಹಳಷ್ಟು ಕ್ಯಾಂಪಸ್ ಸಂದರ್ಶನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇದು ಅವರ ಸಾಮರ್ಥ್ಯದ ಕೊರತೆಯಿಂದ ಅಲ್ಲ. ಆದರೆ, ನಮ್ಮ ಪಠ್ಯಕ್ರಮದಲ್ಲಿನ ಕೊರತೆಯಿಂದಾಗಿ ಅವರು ಉದ್ಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉನ್ನತ ಶಿಕ್ಷಣದಲ್ಲಿ ಉದ್ಯೋಗದಾತರುಗಳಿಗೆ ಅವಶ್ಯಕತೆ ಇರುವಂತಹ ಅಂಶಗಳನ್ನು ಅಳವಡಿಸುವುದು ಬಹಳ ಮುಖ್ಯ. ಇದರ ಹೊರತಾಗಿ ನಾವು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದರೂ ಅದಕ್ಕೆ ತಕ್ಕದಾದ ಕೌಶಲ್ಯ ಹೊಂದಿಲ್ಲದಿದ್ದರೆ ಅಭ್ಯರ್ಥಿಗೆ ಉದ್ಯೋಗ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ಈಗಾಗಲೇ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಉದ್ಯೋಗಾಧಾರಿತ ಅಂಶಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಆದರೆ ಅದು ನಿರೀಕ್ಷೀತ ಮಟ್ಟದಲ್ಲಿ ಇಲ್ಲ. ಈ ಹಿನ್ನಲೆಯಲ್ಲಿ ನಮ್ಮ ಸರಕಾರ ಉನ್ನತ ಶಿಕ್ಷಣದಲ್ಲಿ ಉದ್ಯೋಗಾಧಾರಿತ ಪಠ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.
*ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಬಿಡಿಎ ಆಯುಕ್ತರಾದ ಡಾ. ಜಿ. ಕುಮಾರ್ ನಾಯ್ಕ್ ಅವರು ತಮ್ಮ ಘಟಿಕೋತ್ಸವ ಭಾಷಣದಲ್ಲಿ*, ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆದುಕೊಳ್ಳುವ ಜೊತೆಯಲ್ಲಿಯೇ ಉದ್ಯಮಿಗಳಾಗುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ದೇಶದಲ್ಲಿ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ವಿಫುಲ ಅವಕಾಶಗಳಿವೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾದ ಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಉದ್ಯಮಿಗಳಾಗುವ ಮೂಲಕ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಕರೆ ನೀಡಿದರು.
*ಬಾಕ್ಸ್:*
ಶೀಘ್ರದಲ್ಲೇ ರಾಜ್ಯದ 32 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಹಾಗೂ ಅಕಾಡಿಮಿಕ್ ಕೌನ್ಸಿಲ್ ಸದಸ್ಯರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಸಿಂಡಿಕೆಟ್ ಸದಸ್ಯರ ನೇಮಕಮಾಡುವಂತೆ ಶಿಕ್ಷಣ ತಜ್ಞರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಈ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು. ಎನ್‌ಇಪಿ ಸಾಧಕ ಭಾದಕಗಳ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ತಜ್ಞರು ಹಾಗೂ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಸೂಚಿಸಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸದಂತೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
*ಡಾ. ಎಂ.ಸಿ ಸುಧಾಕರ್, ಉನ್ನತ ಶಿಕ್ಷಣ ಸಚಿವರು.*
ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ. ಎಚ್.ಎನ್ ಸುಬ್ರಹ್ಮಣ್ಯ, ಕಾರ್ಯದರ್ಶಿಗಳಾದ ವಿ.ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್‌ಕುಮಾರ್, ಜಯನಗರ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾದ ಡಾ. ವೆಂಕಟರಾಮ ರೆಡ್ಡಿ, ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 15 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 55 ವಿದ್ಯಾರ್ಥಿಗಳಿಗೆ ರ್ಯಾಂಕ್ ಸೇರಿದಂತೆ 628 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.