ಜೂನ್ 2023: ಇನ್ಫೋಸಿಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಮತ್ತು ಪ್ರಸಿದ್ಧ ಲೇಖಕಿ ಮತ್ತು ಜನಪರವಾದಿ ಸುಧಾ ಮೂರ್ತಿ ಅವರ ಅಸಾಧಾರಣ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 7 ನೇ ತೆಲುಗು ಸಂಭ್ರಮಾಚರಣೆಯ ಸಂದರ್ಭದಲ್ಲಿ ಎನ್‌ಎಟಿಎಸ್ (ಉತ್ತರ ಅಮೇರಿಕಾ ತೆಲುಗು ಸೊಸೈಟಿ) ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ಫೋಸಿಸ್ ದಂಪತಿಗಳು ಈ ಗೌರವಕ್ಕಾಗಿ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, ಈ ದಂಪತಿಗಳಿಗೆ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯವೆಂದು ಎನ್‌ಎಟಿಎಸ್ ಹೇಳಿದೆ.

ಎನ್‌ಎಟಿಎಸ್ 7 ನೇ ತೆಲುಗು ಸಂಭ್ರಮದ ಸಂಚಾಲಕ ಶ್ರೀಧರ್ ಅಪ್ಪಾಸಾನಿ, "ಇಂತಹ ಮಹಿಮಾತೀತ ವ್ಯಕ್ತಿಗಳು ಪ್ರಶಸ್ತಿ ಸ್ವೀಕರಿಸುವ ಮೊದಲು ಸಂಸ್ಥೆಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಾರೆ. ಭಾರತದ ಈ ಅತ್ಯಂತ ಗೌರವಾನ್ವಿತ ದಂಪತಿಗಳನ್ನು ಗೌರವಿಸುವ ಅವಕಾಶ ನಾವು ಪಡೆದಿರುವುದು ನಿಜಕ್ಕೂ ನಮ್ಮ ಅದೃಷ್ಟ ಮತ್ತು ತೆಲುಗು ಸಮಾವೇಶಗಳ ಇತಿಹಾಸದಲ್ಲಿ ಈ ರೀತಿಯ ಕಾರ್ಯಕ್ರಮಗಳು ಶ್ರೇಷ್ಠತೆಯನ್ನು ಎತ್ತಿ ತೋರುತ್ತದೆ” ಎಂದರು.

ತನ್ನ 7 ನೇ ತೆಲುಗು ಸಂಭ್ರಮದ ಉಪ ಸಂಚಾಲಕ ಮತ್ತು ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ರಾಜ್ ಅಲ್ಲಾಡ ವಿಶೇಷ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಾ, ಇನ್ಫೋಸಿಸ್‌ನೊಂದಿಗಿನ ತಮ್ಮ ಒಡನಾಟದ ಮೂಲಕ ಅಮೇರಿಕಾದಲ್ಲಿ ಅವಕಾಶಗಳನ್ನು ಪಡೆಯಲು ಹಾತೊರೆಯುವ ಹಲವಾರು ಕುಟುಂಬಗಳ ಕನಸುಗಳನ್ನು ಸುಗಮಗೊಳಿಸುವಲ್ಲಿ ಎನ್ ಆರ್ ನಾರಾಯಣ ಮೂರ್ತಿ ಅವರು ಮಹತ್ವದ ಪ್ರಭಾವ ಬೀರಿದ್ದಾರೆ. ಅನೇಕ ತಂತ್ರಜ್ಞರು ಮತ್ತು ಉದ್ಯಮಿಗಳಿಗೆ ಮೂರ್ತಿ ಅವರು ಪಿತೃಸಮಾನ ವ್ಯಕ್ತಿ” ಎಂದು ಅವರು ಉಲ್ಲೇಖಿಸಿದರು.

ಎನ್‌ಎಟಿಎಸ್ ನ ಸೃಜನಾತ್ಮಕ ಸಲಹೆಗಾರರಾದ ಶ್ರೀ ಅಟ್ಲೂರಿ ಮತ್ತು ಅಮೇರಿಕಾದ ಪ್ರಮುಖ ತೆಲುಗು ಸಮುದಾಯದ ನಾಯಕ, ಈ ಕಾರ್ಯಕ್ರಮ ಆಯೋಜಿಸಲು ನಿರ್ಣಾಯಕ ಪಾತ್ರವಹಿಸಿದ್ದಾರೆ ಮತ್ತು ಶ್ರೀ ರಾವ್ ಮದ್ದುಕುರಿ ಅವರು ತಮ್ಮ ಅಸಾಧಾರಣ ಬೆಂಬಲ ನೀಡಿದ್ದಾರೆ. ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಅಟ್ಲೂರಿ, “ಈ ಶಕ್ತಿ ದಂಪತಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುವುದು ನಮಗೆ ಸಿಕ್ಕಿರುವ ಒಂದು ದೊಡ್ಡ ಭಾಗ್ಯ. ನಿಮ್ಮ ಪ್ರಭಾವ ಮತ್ತು ನೀವು ನಮ್ಮಲ್ಲಿ ತುಂಬಿದ ಮೌಲ್ಯಗಳು ನಿಜವಾಗಿಯೂ ಪ್ರೋತ್ಸಾಯದಾಯಕವಾಗಿವೆ. ನಾರಾಯಣ ಮೂರ್ತಿ ಅವರು, ಹಾಕಿಕೊಟ್ಟ ಮಾರ್ಗ ಮತ್ತು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿವರ್ತನಾಶೀಲ ಪಾತ್ರ ಅನುಕರಣ Ãಯವಾಗಿದೆ ಮತ್ತು ಸುಧಾ ಮೂರ್ತಿ ಅವರ ಲೋಕೋಪಕಾರ ಮತ್ತು ಸರಳತೆಯಿಂದ ಜಗತ್ತು ಕಲಿಯುತ್ತದೆ." ಎಂದು ಭಾವುಕ ಮಾತುಗಳಾಡಿದರು.

ಎನ್ ಆರ್ ನಾರಾಯಣ ಮೂರ್ತಿಯವರು "ನಾಕು ತೆಲುಗು ಬಾಗ ರಾದು" ಎಂಬ ತೆಲುಗು ವಾಕ್ಯದಿಂದ ಪ್ರಾರಂಭಿಸಿ, ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, "ನನ್ನ ಅಜ್ಜಿ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಪ್ರತಿ ಬೇಸಿಗೆಯಲ್ಲಿ ಅಲ್ಲಿಗೆ ಹೋಗುತ್ತಿದ್ದೆವು ಅಜ್ಜಿಯ ಊರು ಕರ್ನಾಟಕದಲ್ಲಿದ್ದರೂ ಸಹ ಜನರು ಹೆಚ್ಚಾಗಿ ತೆಲುಗು ಮಾತನಾಡುತ್ತಿದ್ದರು. ನಾವು ನೋಡಿದ ಸಿನಿಮಾಗಳೆಲ್ಲ ತೆಲುಗಿನವೇ ಆಗಿದ್ದವು - ಮಾಯಾಬಜಾರ್, ಪೆಳ್ಳಿ ಚೇಸಿ ಚೂಡು, ದೇವದಾಸ್, ಇತ್ಯಾದಿ. ಆದ್ದರಿಂದ, ಒಂದು ಅರ್ಥದಲ್ಲಿ, ನಾವು ಸ್ವಲ್ಪ ತೆಲುಗು ಕಲಿತಿದ್ದೇವೆ, ಆದರೆ ಕಳೆದ 50 ವರ್ಷಗಳಿಂದ, ಅದನ್ನು ಮುಂದುವರಿಸುವ ಸೌಕರ್ಯ ಒದಗಲಿಲ್ಲ. ಆದಾಗ್ಯೂ, ನಮಗೆ ತೆಲುಗಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ಗೌರವವಿದೆ, ನೆಬ್ರಸ್ಕಾದ ಬಿಸಿನೆಸ್ ಸ್ಕೂಲ್ ನಲ್ಲಿ ನನ್ನ ಸಹೋದರ ವಾಸುದೇವ್ ಮೂರ್ತಿ ಅವರು ಅತ್ಯುತ್ತಮ ತೆಲುಗು ಬರಹಗಾರರಾಗಿದ್ದಾರೆ. ನಿಮ್ಮ ದಯೆ, ಔದಾರ್ಯ ಮತ್ತು ವಾತ್ಸಲ್ಯದಿಂದ ನಾನು ಗೌರವಿಸಲ್ಪಟ್ಟಿದ್ದೇನೆ, ನಿಮ್ಮಂತಹ ಸಾಧಕರಿಂದ ನನಗೆ ಮತ್ತು ನನ್ನ ಹೆಂಡತಿಗೆ ಉತ್ತೇಜನ, ಉತ್ಸಾಹ ಮತ್ತು ಶಕ್ತಿಯೊಂದಿಗೆ ನಾವು ಏನನ್ನು ಮಾಡಲು ಸಾಧ್ಯವೋ ಅದನ್ನು ಮಾಡಲು ಸಹಾಯ ಮಾಡುತ್ತದೆ ಎಂದು ನಾನು ಹೇಳಬಲ್ಲೆ, ಪ್ರತಿಯೊಬ್ಬರಿಗೂ ನಾವು ತುಂಬಾ ಕೃತಜ್ಞರಾಗಿರುತ್ತೇವೆ” ಎಂದು ನುಡಿದರು. ತಮ್ಮ ಮನದಾಳದ ಮಾತುಗಳಿಂದ ಪ್ರೇಕ್ಷಕರಿಂದ ಚಪ್ಪಾಳೆಗಳೊಂದಿಗೆ ಹರ್ಷೋದ್ಗಾರ ಮೊಳಗಿತು. 

ಸುಧಾ ಮೂರ್ತಿ ಅವರು ತಮ್ಮ ಭಾಷಣದಲ್ಲಿ, "ನನಗೆ ತೆಲುಗು ಅರ್ಥವಾಗುತ್ತೆ ಆದರೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ, ನಾನು ತೆಲುಗು ಪ್ರಭಾವ ಹೆಚ್ಚಿರುವ ಬಳ್ಳಾರಿಯಲ್ಲಿ ಓದಿದ್ದೇನೆ. ನಾನು ಬಹಳಷ್ಟು ತೆಲುಗು ಚಲನಚಿತ್ರಗಳನ್ನು ನೋಡಿದ್ದೇನೆ ಮತ್ತು ಇಂದಿಗೂ ನಾನು ಕೃಷ್ಣನ ಬಗ್ಗೆ ಯೋಚಿಸಿದಾಗ, ನಾನು ಎನ್‌ಟಿಆರ್ ಅವರನ್ನು ಊಹಿಸುತ್ತೇನೆ, ಈ ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ ಮತ್ತು ಈ ನೆಲದ ನನ್ನ ಸ್ವಂತ ಜನರು ನನ್ನನ್ನು ಗುರುತಿಸಿದ್ದಕ್ಕಾಗಿ ಸಂತೋಷಪಡುತ್ತೇನೆ" ಎಂದು ಭಾವನೆ ವ್ಯಕ್ತಪಡಿಸಿದರು.

ನ್ಯಾಟ್ಸ್ ನ ಮುಖ್ಯಸ್ಥೆ ಡಾ.ಅರುಣಾ ಗಂಟಿ, ನ್ಯಾಟ್ಸ್ ಅಧ್ಯಕ್ಷ ಬಾಪು ನೂತಿ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಭಾರತೀಯ ಚಲನಚಿತ್ರ ನಿರ್ಮಾಪಕ ಶ್ರೀಯುತ ಅಲ್ಲು ಅರವಿಂದ್, ಘಟ್ಟಮನೇನಿ ಆದಿ ಶೇಷಗಿರಿ ರಾವ್, ಮತ್ತು ರೈನ್‌ಬೋ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಮೇಶ್ ಕಂಚಾರ್ಲ, ಆಸ್ಕರ್ ವಿಜೇತ ಚಂದ್ರಬೋಸ್ ಮತ್ತು ಸಾಯಿಕುಮಾರ್, ಆಲಿ, ಸಂಯುಕ್ತಾ ಮೆನನ್, ನೇಹಾ ಶೆಟ್ಟಿ, ನಿರ್ದೇಶಕಿ ಗೋಪಿಚಂದ್ ಮಲ್ಲಿನ್ ನೇಹಾ ಶೆಟ್ಟಿ ಸೇರಿದಂತೆ ಭಾರತದ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಮೇರಿಕಾದ ತೆಲುಗು ಸಮುದಾಯದ ಗೌರವಾನ್ವಿತ ಸದಸ್ಯರಾದ ಸ್ಯಾಮ್ ಮದ್ದಾಲಿ, ಮಧು ಕೊರ್ರಪಾಟಿ, ಗಂಗಾಧರ ದೇಸು, ಡಾ. ರವಿ ಆಲಪಾಟಿ, ಡಾ. ಪೂರ್ಣ ಅಟ್ಲೂರಿ, ಟಿ.ಜಿ.ವಿಶ್ವ ಪ್ರಸಾದ್, ಹರಿ ವಾಲುರುಪಲ್ಲಿ, ಕಿಶೋರ್ ಕೊತ್ತಪಲ್ಲಿ, ಶರ್ಮಾ ಉಪಸ್ಥಿತರಿದ್ದರು. ಉತ್ತರ ಅಮೆರಿಕಾದ ಸ್ಥಳೀಯ ಹಲವಾರು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನ್ಯೂಜೆರ್ಸಿ ರಾಜ್ಯದ ಅತ್ಯಧಿಕ ಚುನಾಯಿತ ತೆಲುಗು ಅಧಿಕಾರಿ ಶಾಂತಿ ನರ್ರಾ, ಸ್ಟಾನ್ಲಿ ಮತ್ತು ನ್ಯೂಜೆರ್ಸಿ ಸ್ಟೇಟ್ ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಕಮಿಷನ್‌ನ ಕಮಿಷನರ್ ಸಾಕೇತಾ ಚದಲವಾಡ ಅವರು ಕೂಡ ಭಾಗವಹಿಸಿದ್ದರು. 

ರಾಜೇಶ್ವರಿ ಉದಯಗಿರಿ ಅವರು ಕಾರ್ಯಕ್ರಮ ಕೌಶಲ್ಯದಿಂದ ನಿರೂಪಿಸಿದರು. ಇದು ಆತ್ಮೀಯತೆ ಮತ್ತು ಆತಿಥ್ಯದಿಂದ ತುಂಬಿದ ಸಂಜೆಯಾಗಿದ್ದು, ಎನ್‌ಎಟಿಎಸ್ ಮಂಡಳಿಯ ಸದಸ್ಯರಿಗೆ ಮಾತ್ರವಲ್ಲದೆ ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಗೆ ಸಂತೋಷ ತಂದಿತು. ದಕ್ಷಿಣ ಭಾರತ ಸಮುದಾಯದ 8000 ಕ್ಕೂ ಹೆಚ್ಚು ಜನರು ಈ ಕ್ಷಣವನ್ನು ಸಂತೋಷ ಮತ್ತು ಹೆಮ್ಮೆಯಿಂದ ಆಚರಿಸಿದರು. ವೈಕುಂಟ್ ಡೆವಲಪರ್ಸ್, ತನಿಷ್ಕ್ ಜ್ಯುವೆಲರಿ, ವೆಲ್ತ್ ಡಿಎನ್‌ಎ ಮತ್ತು ಜಿ & ಸಿ ಗ್ಲೋಬಲ್ ಮತ್ತು ರೋಡಿಯಂ ದಾನಿಗಳಾದ ರಾಮು ವೇನಿಗಲ್ಲ ಮತ್ತು ಶ್ರೀನಿವಾಸ್ ವುಯ್ಯೂರು ರವರ ಅಲ್ಕಾನಂದ ರಿವರ್ ಫ್ರಂಟ್ ಮತ್ತು ಇತರರು ಕಾರ್ಯಕ್ರಮದ ಪ್ರಾಯೋಜಕರಾಗಿ ತಮ್ಮ ಜವಾಬ್ದಾರಿ ಕಾರ್ಯನಿರ್ವಹಿಸಿದರು. ಎನ್ ಎ ಟಿ ಎಸ್ ಕಾರ್ಯಕ್ರಮ ಪ್ರಾಯೋಜಕರಿಗೆ ಧನ್ಯವಾದಗಳನ್ನು ಅರ್ಪಿಸಿತು.