ಬೆಂಗಳೂರು: ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಾಲ್ಕು ಗ್ಯಾರಂಟಿಗಳಿಗೆ ಅಧಿಕೃತ ಆದೇಶವನ್ನು ಕೂಡ ಹೊರಡಿಸಿದೆ. ಹೀಗೆ ಹೊರಡಿಸಿದಂತ ಅಧಿಕೃತ ಆದೇಶದ ಮಾರ್ಗಸೂಚಿಯಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಇಂದು ಹೊರಡಿಸಿರುವಂತ ಶಕ್ತಿ ಯೋಜನೆಯ ಷರತ್ತುಗಳನ್ನು ಗಮನಿಸಿದರೇ, ಉಚಿತ ವಿದ್ಯುತ್ ಯೋಜನೆ ಪ್ರಯೋಜನ ಸಿಗೋದು ಡೌಟ್ ಎಂಬುದಾಗಿ ಹೇಳಲಾಗುತ್ತಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.

ಶಕ್ತಿ ಯೋಜನೆ ಗ್ಯಾರಂಟಿ ಜಾರಿಗೂ ಮುನ್ನ ಹಾಗೂ ತಾತ್ವಿಕ ಒಪ್ಪಿಗೆಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಿದ ನಂತ್ರ, ಜೂನ್ 2ರಂದು ನಡೆದಿದ್ದಂತ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಿದ್ದಂತ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡ ನೀಡಲಾಗಿತ್ತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಂತ ಸಿಎಂ, ಮನೆ ಮಾಲೀಕರು ಸೇರಿದಂತೆ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದರು.

ಈ ಬಳಿಕ ಇಂದು ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ನಡವಳಿಯಲ್ಲಿ, ದಿನಾಂಕ 02-06-2023ರಂದು ನಡೆದ ಸಂಪುಟ ಸಭೆಯಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿರುತ್ತದೆ. ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಯ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ( ಆರ್ಥಿಕ ವರ್ಷ2022-23ರ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇಕಡ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆ ಮಿತಿಯನ್ನು ಅನುಮಿತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್ ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸಂಪುಟ ಅನುಮೋದಿಸಿದೆ ಎಂದಿದ್ದಾರೆ. ಅದನ್ನು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಜುಲೈ 2023ರ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ 2023ರ ತಿಂಗಳಿನಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಕೆಲ ಷರತ್ತುಗಳನ್ನು ಶಕ್ತಿ ಯೋಜನೆಗೆ ವಿಧಿಸಿದ್ದಾರೆ. ಆ ಷರತ್ತುಗಳಲ್ಲಿ ಒಂದು ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುವವರು ಎಂದು ಹೇಳಲಾಗಿದೆ.

ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ ಅವರು, ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಒಂದು ಆರ್ ಆರ್ ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಎಂದು ತಿಳಿಸಿದ್ದಾರೆ. ಅಲ್ಲದೇ ಬಾಡಿಗೆದಾರರು ಮತ್ತು ಮಾಲೀಕರು ಎಂದು ವ್ಯತ್ಯಾಸ ಮಾಡುತ್ತಿಲ್ಲ. ಸ್ಥಾವರ ಎಂಬುದರ ಅರ್ಥ ಒಂದು ಆರ್ ಆರ್ ನಂಬರ್ ಆಗಿದೆ. ಯಾರು ಎಷ್ಟೇ ಆರ್ ಆರ್ ನಂಬರ್ ಹೊಂದಿರಲಿ, ಆದರೇ ಒಂದು ಆರ್ ಆರ್ ನಂಬರ್ ಗೆ ಮಾತ್ರ ಯೋಜನೆ ಅಡಿಯಲ್ಲಿ ಪ್ರಯೋಜನ ದೊರೆಯಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇನ್ನೂ ಮನೆ ಮಾಲೀಕರ ಹೆಸರಿನಲ್ಲಿ ಹಲವು ಆರ್ ಆರ್ ನಂಬರ್ ಗಳಿರುತ್ತವೆ. ಅವುಗಳಲ್ಲಿ ಬಾಡಿಗೆದಾರರು ವಾಸಿಸುತ್ತಿರುತ್ತಾರೆ. ಈ ಬಾಡಿಗೆದಾರರಿಗೆ ರಾಜ್ಯ ಸರ್ಕಾರ ವಿಧಿಸಿರುವಂತ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರು ಎಂಬ ಷರತ್ತನಿಂದಾಗಿ ಉಚಿತ ವಿದ್ಯುತ್ ಪ್ರಯೋಜನ ದೊರೆಯವುದು ಡೌಟ್ ಎಂಬುದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಸರ್ಕಾರ ಯಾವ ನಿಲುವನ್ನು ವ್ಯಕ್ತ ಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.